ಹಾವೇರಿ: ನಗರದ ಕೆಲ ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳ ಮ್ಯಾನೇಜರ್‌ಗಳು ಶಾಮಿಯಾನ ಪೆಂಡಾಲ್ ಹಾಕಲು ಬೇರೆಯವರಿಗೆ ಅವಕಾಶವಿಲ್ಲ ಎಂದು ಕಮಿಷನ್ ಪಡೆದು ಕೆಲವರಿಗೆ ಮಾತ್ರ ಅವಕಾಶ ನೀಡುತ್ತಿದ್ದಾರೆ. ಇದರಿಂದ ಉಳಿದವರ ಕೆಲಸಕ್ಕೆ ಅಡ್ಡಿಯಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಸೂಕ್ತ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪೆಂಡಾಲ್ ಮತ್ತು ಶಾಮಿಯಾನ ಸಪ್ಲೆಯರ್ಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಮಾಣಿಕಚಂದ ಲಾಡರ ಒತ್ತಾಯಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಂಡಾಲ್ ಮತ್ತು ಶಾಮಿಯಾನ ಸಪ್ಲೆಯರ್ಸ್ ಅಸೋಸಿಯೇಶನ್ ಸಂಘ ಯಾವುದೇ ಜಾತಿ, ಸಮಾಜಕ್ಕೆ ಸೀಮಿತವಾಗಿರದೇ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ. ನಗರದಲ್ಲಿರುವ ಕೆಲವು ಸಮುದಾಯ ಭವನ ಹಾಗೂ ಕಲ್ಯಾಣಮಂಟಪಗಳಿಗೆ ಶಾಮಿಯಾನ ಹಾಕಲು ಹೋದರೆ ಅಲ್ಲಿರುವ ಮುಖ್ಯಸ್ಥರು ಇಲ್ಲಿ ಹೊರಗಿನವರಿಗೆ ಶಾಮಿಯಾನ ಪೆಂಡಾಲ್, ಡೆಕೋರೇಶನ್ ಮಾಡಲು ಅವಕಾಶವಿಲ್ಲ. ಕೇವಲ ಸಮುದಾಯ ಭವನ, ಕಲ್ಯಾಣ ಮಂಟಪದವರಿಗೆ ಮಾತ್ರ ಅವಕಾಶವಿದೆ. ಬೇರೆಯವರು ಯಾರು ಬರಬಾರದು ಎಂದು ಹೇಳಿ ಅಪಮಾನಿಸಿ, ಅನ್ಯಾಯ ಮಾಡುತ್ತಿದ್ದಾರೆ.
ಇದರಿಂದ ಮದುವೆ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಬುಕ್ ಮಾಡಿಕೊಂಡವರಿಗೆ ಸಮಸ್ಯೆಯಾಗುತ್ತದೆ. ಅಲ್ಲದೇ ಪೆಂಡಾಲ್ ಮುಖ್ಯಸ್ಥರಿಗೆ, ಕಾರ್ಮಿಕರಿಗೂ ಅನ್ಯಾಯವಾಗುತ್ತಿದೆ. ಹಾವೇರಿಯ ಗುರುಭವನ, ಕೆಇಬಿ ಸಮುದಾಯ ಭವನ, ಸಿದ್ದರಾಮೇಶ್ವರ ಸಮುದಾಯ ಭವನ, ಸೇರಿ ಕೆಲವೆಡೆ ಅವಕಾಶ ನೀಡುತ್ತಿಲ್ಲ. ಈ ಅನ್ಯಾಯವನ್ನು ಸಂಬಂಧಪಟ್ಟ ಆಡಳಿತ ಮಂಡಳಿಯವರು ಸರಿಪಡಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಮುರುಗೇಶ ಹುಂಬಿ, ಕಾರ್ಯದರ್ಶಿ ಶಿವಯೋಗಿ ಹೂಗಾರ, ರಬ್ಬಾನಿ ಚೂಡಿಗಾರ, ಇರ್ಫಾನ್ ಅಗಡಿ, ನಾಸೀರ್ ಪಾಟೀಲ, ರೋಷನ್ ಗುಡಗೇರಿ, ಮಲ್ಲಿಕಾರ್ಜುನ, ಇತರರಿದ್ದರು.