ಜಿಲ್ಲೆ

ಡೆಂಘೆ ನಿಯಂತ್ರಿಸುವಲ್ಲಿ ಪಿಡಿಒಗಳ ಪಾತ್ರ ಮುಖ್ಯ; ಅಡ್ವೊಕೆಸಿ ಕಾರ್ಯಾಗಾರದಲ್ಲಿ ಟಿಎಚ್‌ಒ ಡಾ.ಪ್ರಭಾಕರ ಕುಂದೂರ ಹೇಳಿಕೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಸಮುದಾಯ ಮಟ್ಟದಲ್ಲಿ ಡೆಂಘೆ ಜ್ವರ ನಿಯಂತ್ರಣ ಹಾಗೂ ಮುಂತಾದ ಸಾಂಕ್ರಾಮಿಕ ರೋಗಗಳ ಮುಂಜಾಗೃತ ಕ್ರಮಗಳ ಕುರಿತು ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಿ ಜಾಗೃತಿ ಮೂಡಿಸುವಲ್ಲಿ ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ(ಪಿಡಿಒ)ಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹಾವೇರಿ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಎಸ್. ಕುಂದೂರ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಡೆಂಘೆ ದಿನಾಚರಣೆ ಅಂಗವಾಗಿ ತಾಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗಾಗಿ ಇತ್ತೀಚೆಗೆ ಆಯೋಜಿಸಿದ್ದ ಅಡ್ವೊಕೆಸಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ನೀರು ನೀಲ್ಲದೇ ಇರುವ ಹಾಗೆ ನೋಡಿಕೊಳ್ಳಬೇಕು. ಈ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯಿಂದ ದ್ರಾವಣವನ್ನು ಪಡೆದುಕೊಂಡು ಫಾಗಿಂಗ್ ಮಾಡಿಸುವಂತೆ ಸೂಚಿಸಿದರು.
ಕೀಟ ಶಾಸ್ತ್ರಜ್ಞ ಶ್ರೀಕಾಂತ ಮಾತನಾಡಿ, ಸೊಳ್ಳೆಗಳಿಂದ ಹರಡುವ (ಕೀಟ ಜನ್ಯ ರೋಗಗಳು)ರೋಗಗಳಾದ ಮಲೇರಿಯಾ, ಡೆಂಘೆ, ಚಿಕ್ಯೂನ್‌ಗುನ್ಯ, ಆನೆಕಾಲು ರೋಗ, ಮೆದಳು ಜ್ವರದ ಬಗ್ಗೆ ಹಾಗೂ ಸೊಳ್ಳೆಗಳ ಉತ್ಪತ್ತಿ, ಸೊಳ್ಳೆಯ ಜೀವನದ ಹಂತಗಳ ಕುರಿತು ಮಾಹಿತಿ ನೀಡಿದರು.
ಪ್ರಸ್ತುತ ದಿನಗಳಲ್ಲಿ ಮಳೆಯ ಅಭಾವದ ಕಾರಣ ಸಾರ್ವಜನಿಕರು ತಮ್ಮ ಮನೆಗಳಲ್ಲಿ ನೀರಿನ ಸಂಗ್ರಹಣೆ ಮಾಡುವುದು ಸಾಮಾನ್ಯವಾಗಿದೆ. ಸಂಗ್ರಹಿಸಿದ ನೀರಿನಲ್ಲಿ ಸ್ವಲ್ಪ ದಿನಗಳ ನಂತರ ಲಾರ್ವಾ ಹುಳುಗಳು ಜನಿಸಿ ಸೊಳ್ಳೆಗಳಾಗುವ ಕಾರಣ ಕೀಟ ಜನ್ಯ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಈ ವರ್ಷ ತಾಲೂಕಿನಲ್ಲಿ ಒಟ್ಟು 10 ಡೆಂಘೆ ಪ್ರಕರಣಗಳು ಪತ್ತೆಯಾಗಿದ್ದು, ಈ ರೋಗಿಗಳು ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ ಎಂದರು.
ಮುಂಜಾಗೃತವಾಗಿ ಗ್ರಾಮಗಳಲ್ಲಿ ನೀರನ್ನು ಸಂಗ್ರಹಣಾ ತೊಟ್ಟಿಗಳನ್ನು ಶುಚಿಗೊಳಿಸಿ ಒಣಗಿಸಿದ ನಂತರ ನೀರು ಸಂಗ್ರಹಿಸಬೇಕು. ಮನೆಗಳಲ್ಲಿ ಸೊಳ್ಳೆ ಪರದೆ ಬಳಸಬೇಕು, ಮೈತುಂಬ ಬಟ್ಟೆ ಧರಿಸಬೇಕು, ರೋಗದ ಲಕ್ಷಣ ಕಂಡುಬಂದಲ್ಲಿ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಚಂದ್ರಶೇಖರ ಹಿತ್ತಲಮನಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅಮೃತಗೌಡ ಪಾಟೀಲ ಮಾತನಾಡಿ, ಶುದ್ದ ನೀರು ಕುಡಿಯುವ ಘಟಕಗಳ ನೀರನ್ನು ಪಡೆದುಕೊಂಡು ಜೈವಿಕ ವಿಧಾನ ಎಚ್.ಟು.ಎಸ್ ನೀರನ್ನು ಪರೀಕ್ಷೆಗೆ ಸಲ್ಲಿಸಬೇಕು. ವರದಿಯಲ್ಲಿ ನೀರು ಯೋಗ್ಯ ಇರದೇ ಇದ್ದರೆ ಅಂತಹ ಘಟಕಗಳನ್ನು ದುರಸ್ತಿಗೊಳಿಸಬೇಕು ಹಾಗೂ ಗ್ರಾಮಗಳ ನೀರಿನ ಟ್ಯಾಂಕ್‌ಗಳಲ್ಲಿ ಕ್ಲೋರಿನೇಶನ್ ಮಾಡಿದ ನೀರನ್ನು ಸಾರ್ವಜನಿಕರಿಗೆ ಪೂರೈಸಬೇಕು ಎಂದರು.
ತಾ.ಪಂ.ಸಹಾಯಕ ನಿರ್ದೇಶಕ ಸಂದೀಪ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಇಲಾಖೆ ಅಧೀಕ್ಷಕ ಎಸ್.ಎಫ್.ಸಾಬಳದ ಹಾಗೂ ತಾಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಭಾಗವಹಿಸಿದ್ದರು.
ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಪ್ಪ ಕನ್ನಮ್ಮನವರ ನಿರೂಪಿಸಿದರು. ಹಿರಿಯ ಆರೋಗ್ಯ ನಿರೀಕ್ಷಕ ಎ.ಪಿ.ಪಾಟೀಲ ವಂದಿಸಿದರು.