ಹಾವೇರಿ: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದಿಂದ ಮೈಸೂರಿನಲ್ಲಿ ಆ.28ರಂದು ನಡೆಯುವ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ರಾಜ್ಯಮಟ್ಟದ 5ನೇ ಪತ್ರಿಕಾ ವಿತರಕರ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ನಗರದಲ್ಲಿ ಶುಕ್ರವಾರ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಮೈಸೂರು ಜಿಲ್ಲಾ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಆ.28ರಂದು ಬೆಳಗ್ಗೆ 11.30ಕ್ಕೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯ ಘಟಿಕೋತ್ಸವ ಭವನದಲ್ಲಿ ಸಮಾರಂಭ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ವಿವಿಧ ಮಠಾಧೀಶರು, ಹಾಲಿ, ಮಾಜಿ ಸಚಿವರು, ಶಾಸಕರು, ಸಂಸದರು, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪದಾಧಿಕಾರಿಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದು ಹಾವೇರಿ ತಾಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಕರಬಸಪ್ಪ ಹಳದೂರ ತಿಳಿಸಿದ್ದಾರೆ.
ಪತ್ರಿಕಾ ವಿತರಕರ ಸಂಘದ ಪ್ರಮುಖರಾದ ಭೀರಪ್ಪ ಕೂರಗುಂದ, ಜಯಪ್ಪ ಬಣಕಾರ, ಭೀಮಣ್ಣ ಕರ್ಜಗಿ, ಮಂಜುನಾಥಸ್ವಾಮಿ ಹಿರೇಮಠ, ಬಸವರಾಜ ಬೆನ್ನೂರ, ಮಂಜುನಾಥ ಹೊಳಗಿ, ಗಿರೀಶ ಕಳ್ಳಿಮನಿ, ಸಂಜೀವ ಏಳುಕೊಳ್ಳದ, ಅಶೋಕ ಇಂಗಳಗಿ, ಇತರರಿದ್ದರು.