ಜಿಲ್ಲೆ

ಬೆಳೆನಷ್ಟ ಪರಿಹಾರ ಬಿಡುಗಡೆಗೆ ಆಗ್ರಹ; ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಒತ್ತಾಯ

ಹಾವೇರಿ: ಜಿಲ್ಲೆಯಲ್ಲಿ ಅತಿಯಾದ ಮುಂಗಾರುಪೂರ್ವ ಮಳೆ ಹಾಗೂ ನಿರಂತರವಾಗಿ ಸುರಿಯುತ್ತಿರುವ ಮುಂಗಾರು ಮಳೆಯಿಂದಾಗಿ ರೈತರ ಬೆಳೆಗಳು ಹಳದಿ ಹಾಗೂ ಕೆಂಪು ಬಣ್ಣಕ್ಕೆ ತಿರುಗಿ ನಷ್ಟ ಉಂಟಾಗುತ್ತಿದೆ. ಜಿಲ್ಲಾಡಳಿತದಿಂದ ಈ ಕುರಿತು ಸಮೀಕ್ಷೆ ಮಾಡಿ ರೈತರಿಗೆ ನಷ್ಟ ಪರಿಹಾರ ಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಆಗ್ರಹಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಬಿತ್ತನೆ ಮಾಡಿ ಒಂದು ತಿಂಗಳವರೆಗೆ ಸತತವಾಗಿರುವ ಮಳೆಯಿಂದ ಬೆಳೆಗಳು ಹಳದಿ ರೋಗಕ್ಕೆ ತಿರುಗುತ್ತಿವೆ. ಮತ್ತೊಮ್ಮೆ ಬಿತ್ತನೆ ಮಾಡುವ ಪರಿಸ್ಥಿತಿ ಇದೆ. ಹಾಗಾಗಿ, ನಷ್ಟ ಪರಿಹಾರ ಕೊಡಬೇಕೆಂದರು.

ರೈತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಬೀಜೋತ್ಪಾದನೆಯಲ್ಲಿ ಜಿಲ್ಲೆಗೆ ನಂಬರ್ ಒನ್ ಹೆಸರಿದೆ. ಈಗ ಕಳಪೆ ಬೀಜ ಮಾರಾಟ ಮಾಡುವ ಮೂಲಕ ಜಿಲ್ಲೆಯ ಹೆಸರು ಹಾಳಾಗುತ್ತಿದೆ. ಬೀಜ, ಗೊಬ್ಬರದ ಸಮಸ್ಯೆ ಹೆಚ್ಚಾಗಿದೆ. ಯೂರಿಯಾ ಸರಬರಾಜು ಆಗುತ್ತಿಲ್ಲ. ಕೃಷಿ ಇಲಾಖೆ ಜೆಡಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಬೆಳೆವಿಮೆ ಅರ್ದ ಆಗಿದೆ. ಯಾರು ಹಣ ತುಂಬಿದ್ದಾರೆ ಆ ಹೊಲಗಳುಗೆ ಬಂದು ಸವೇ ಮಾಡಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಎಚ್.ಎಚ್.ಮುಲ್ಲಾ, ದಿಳ್ಳೆಪ್ಪ ಮಣ್ಣೂರ, ಶಿವಯೋಗಿ ಹೊಸಗೌಡ್ರ, ಮಾಲತೇಶ ಪೂಜಾರ, ಸುರೇಶ ಚಲವಾದಿ, ಶಿವಬಸಪ್ಪ ಗೋವಿ, ಚನ್ನಪ್ಪ ಮರಡೂರ, ರಾಜು ತರ್ಲಗಟ್ಟ, ಪರಮೇಶಪ್ಪ ಅಣಜಿ, ಮಲ್ಲೇಶಪ್ಪ ಮಂಡಕ್ಕಿ, ಹೇಮಣ್ಣ ಕೋಡಿಹಳ್ಳಿ, ಕಲ್ಲಪ್ಪ ಸಣಮನಿ, ನಂದೀಶ ಮಾಳಗಿ, ಇತರರಿದ್ದರು.

ರೈತರ ಆತ್ಮಹತ್ಯೆಗೆ ಸರ್ಕಾರ ಕಾರಣ :

ರಾಜ್ಯದಲ್ಲಿ ಹಾವೇರಿ ಜಿಲ್ಲೆಯಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಖೇದಕರ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯ ಕಾರಣ. ಇದು ಆತ್ಮಹತ್ಯೆ ಅಲ್ಲ ಸರ್ಕಾರದಿಂದಾದ ಕೊಲೆ. ಜಿಲ್ಲೆಯ ನದಿಗಳಿಗೆ ಅಲ್ಲಲ್ಲಿ ಚೆಕ್‌ಡ್ಯಾಮ್ ನಿರ್ಮಿಸಬೇಕು. ಡಿಸಿಸಿ ಬ್ಯಾಂಕ್ ಸ್ಥಾಪಿಸಬೇಕು. ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡಬೇಕು. ವರದಾ- ಬೇಡ್ತಿ ನದಿ ಜೋಡಣೆ ಮಾಡಬೇಕು ಎಂದರು ರಾಮಣ್ಣ.

ಬೆಂಗಳೂರು ಚಲೋ 4ರಂದು

ದೇವನಹಳ್ಳಿಯಲ್ಲಿ ಕೆಐಎಡಿಬಿಯಿಂದ ರೈತರ ಜಮೀನು ಭೂಸ್ವಾಧೀನ ವಿರೋಧಿಸಿ ಜು.4ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಿಂದ ಸಾವಿರಕ್ಕೂ ಅಧಿಕ ರೈತರು ಭಾಗವಹಿಸಲಿದ್ದಾರೆ ಎಂದು ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.