ಜಿಲ್ಲೆ

ಪಂಚಮಸಾಲಿ ಸಮಾಜದಿಂದ ಬೆಳಗಾವಿ ಲಾಠಿ ಚಾರ್ಜ್‌ಗೆ ಖಂಡನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಬೆಳಗಾವಿಯಲ್ಲಿ ಡಿ.10ರಂದು ಪಂಚಮಸಾಲಿ ಮೀಸಲಾತಿ ಹೋರಾಟ ಸಂದರ್ಭದಲ್ಲಿ ಲಾಠಿ ಚಾರ್ಜ್ ನಡೆಸಿರುವುದನ್ನು ಖಂಡಿಸಿ ಹಾಗೂ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದಿಂದ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಬೆಳಗಾವಿಯಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಮೀಸಲಾತಿ ನೀಡುವಂತೆ ಶಾಂತಿಯುತ ಹೋರಾಟ ನಡೆಸುತ್ತಿದ್ದ ವೇಳೆ ಪ್ರತಿಭಟನೆ ಹತ್ತಿಕ್ಕುವ ಉದ್ದೇಶದಿಂದ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದು ಸಮಾಜಕ್ಕೆ ಅಪಾರ ನೋವಾಗಿದೆ. ಪಂಚಮಸಾಲಿ ಸಮಾಜ ಬಾಂಧವರು ಸಾತ್ವಿಕರು. ಸರ್ಕಾರಕ್ಕೆ ಕೆಟ್ಟ ಹೆಸರು ತರಲಿಕ್ಕೆ ಬಂದವರಲ್ಲ. ನ್ಯಾಯಯತ ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡಲು ಬಂದವರು. ಅಂಥವರ ಮೇಲೆ ಲಾಠಿಚಾರ್ಜ್ ನಡೆಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಯಾರೋ ಕಿಡಿಗೇಡಿಗಳು ಕಲ್ಲು ತೂರುವ ಮೂಲಕ ಹೋರಾಟದ ದಿಕ್ಕು ತಪ್ಪಿಸುವ ಮತ್ತು ಸಮಾಜಕ್ಕೆ ಕಪ್ಪುಚುಕ್ಕೆ ತರುವ ಕೆಲಸ ಮಾಡಿದ್ದಾರೆ. ಸರ್ಕಾರ ಇಡೀ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಘಟನೆಯಲ್ಲಿ ಅಮಾಯಕರ ಮೇಲೆ ಹಲ್ಲೆ ಮಾಡಿ ಬಂಧಿಸಿ ಪ್ರಕರಣ ದಾಖಲಿಸಿರುವ ಸರ್ಕಾರದ ಕ್ರಮ ಪ್ರಜಾತಂತ್ರ ವಿರೋಧಿಯಾಗಿದೆ. ಮುಖ್ಯಮಂತ್ರಿಯವರು ಪಂಚಮಸಾಲಿ ಸಮಾಜದ ಮನವಿಗೆ ಸ್ಪಂದಿಸದೇ ಪ್ರತಿಭಟನೆಯನ್ನು ವಿಫಲಗೊಳಿಸುವ ಪ್ರಯತ್ನ ಮಾಡಿ ಸಮಾಜಕ್ಕೆ ಅನ್ಯಾಯ ಎಸಗಿದ್ದಾರೆ ಎಂದು ದೂರಿದರು. ಬೆಳಗಾವಿ ಘಟನೆಗೆ ಸಂಬಂಧಿಸಿದಂತೆ ಹೋರಾಟಗಾರರ ವಿರುದ್ಧ ಎಲ್ಲ ಪ್ರಕರಣ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ಶರಣಮ್ಮ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಪಂಚಮಸಾಲಿ ಸಮಾಜ ಕೂಡಲಸಂಗಮ ಪೀಠದ ಜಿಲ್ಲಾಧ್ಯಕ್ಷ ಬಸವರಾಜ ಹಾಲಪ್ಪನವರ, ವೀರಶೈವ ಲಿಂಗಾಯತ ಪಂಚಮಸಾಲಿ ಹರಿಹರ ಪೀಠದ ಜಿಲ್ಲಾಧ್ಯಕ್ಷ ನಾಗೇಂದ್ರ ಕಟಕೋಳ, ತಾಲೂಕಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ಸಮಾಜದ ಪ್ರಮುಖರಾದ ಪಿ.ಡಿ.ಶಿರೂರ, ಮಲ್ಲಿಕಾರ್ಜುನ ಹಾವೇರಿ, ನಿಗಂಪ್ಪ ಪೂಜಾರ, ಶಂಕರ ಬಿಸರಳ್ಳಿ, ನಂಜುಂಡೇಶ ಕಳ್ಳೇರ, ಮಲ್ಲಿಕಾರ್ಜುನ ಸಾತೇನಹಳ್ಳಿ, ಜಗದೀಶ ಕನವಳ್ಳಿ, ಡಾ.ಬಸವರಾಜ ವೀರಾಪೂರ, ಎಸ್.ಬಿ.ಇಟಗಿ, ಮಲ್ಲಿಕಾರ್ಜುನ ಅಗಡಿ, ರಾಜಶೇಖರ ಹಲಸೂರ, ಗಿರೀಶ ಗುಮಕಾರ, ಶಿವಯೋಗಿ ಸಣಮನಿ, ಪ್ರಕಾಶ ಉಜನಿಕೊಪ್ಪ, ಫಕ್ಕೀರಗೌಡ ಪಾಟೀಲ, ಜಯಪ್ಪ ದೇಸಳ್ಳಿ, ಶರಣಪ್ಪ ಸೂರದ, ಈಶ್ವರಗೌಡ ಪಾಟೀಲ, ಜಯರಾಜ ದೇಸಳ್ಳಿ, ಬಸವರಾಜ ಗಡೇಕರ, ರಮೇಶ ಮಲ್ಲಾಪುರ, ಇತರರು ಪಾಲ್ಗೊಂಡಿದ್ದರು.