ಜಿಲ್ಲೆ

ವಿಘ್ನನಿವಾರಕನ ಸ್ವಾಗತಕ್ಕೆ ಹಾವೇರಿ ಸಜ್ಜು

ಹಾವೇರಿ: ಜಿಲ್ಲೆಯಲ್ಲಿ ಬರದ ನಡುವೆಯೂ ಗಣೇಶ ಚತುರ್ಥಿಯ ಸಾಂಪ್ರದಾಯಿಕ ಆಚರಣೆಗೆ ಎಲ್ಲೆಡೆ ಭರದ ಸಿದ್ಧತೆ ನಡೆದಿವೆ. ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಜನತೆ ಸಜ್ಜಾಗಿದ್ದು, ಗಣಪನ ಸ್ವಾಗತಕ್ಕೆ ಅಂತಿಮ ತಯಾರಿ ನಡೆಸಿದ್ದಾರೆ.


ಮಾರುಕಟ್ಟೆಯಲ್ಲಿ ತರಹೇವಾರಿ ಗಣೇಶನ ಮಣ್ಣಿನ ಮೂರ್ತಿಗಳು ಮಾರಾಟಕ್ಕೆ ಸಿದ್ಧವಿದ್ದು, ಕಲಾಕಾರರು ಅಂತಿಮ ಸ್ಪರ್ಶ ನೀಡುವಲ್ಲಿ ನಿರತರಾಗಿದ್ದಾರೆ. ಬಾಲ ಗಣೇಶ, ಕೃಷ್ಣರೂಪಿ, ವೆಂಕಟೇಶ್ವರ ಸ್ವರೂಪಿ, ಮಣಿಕಂಠ, ಈಶ್ವರ, ನಟರಾಜ ಸ್ವರೂಪಿ, ಆನೆ ಮೇಲೆ ಕುಳಿತಿರುವ ಗಣೇಶ ಸೇರಿದಂತೆ ವಿವಿಧ ಬಗೆಯ ಮಣ್ಣಿನ ಗಣಪತಿ ಮೂರ್ತಿಗಳು ಕಣ್ಮನ ಸೆಳೆಯುತ್ತಿವೆ. ಭಕ್ತರು ಮುಂಗಡ ಹಣ ನೀಡಿ ಬುಕ್ಕಿಂಗ್ ಮಾಡುವಲ್ಲಿ ನಿರತರಾಗಿದ್ದಾರೆ.


ನಗರದ ಎಂಜಿ ರಸ್ತೆಯಲ್ಲಿರುವ ವೀರಭದ್ರೇಶ್ವರ ದೇವಸ್ಥಾನ, ವಾಲ್ಮೀಕಿ ವೃತ್ತದ ಬಳಿ ಇರುವ ಆಂಜನೇಯ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ, ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಲಾಕಾರರು ಗಣೇಶ ಮೂರ್ತಿಗಳನ್ನು ತಯಾರಿಸಿ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. 300 ರೂ.ನಿಂದ 10, 20, 30 ಸಾವಿರ ರೂ.ವರೆಗೆ ಚಿಕ್ಕ ಗಣೇಶ, ದೊಡ್ಡ ಮಣ್ಣಿನ ಗಣೇಶ ಮೂರ್ತಿಗೆ ಬೆಲೆ ನಿಗದಿಪಡಿಸಲಾಗಿದೆ ಎಂದು ಕಲಾಕಾರ ಸಂತೋಷ ಕಮ್ಮಾರ ಮಾಹಿತಿ ನೀಡಿದ್ದಾರೆ.


ಕೊನೇ ಕ್ಷಣದಲ್ಲಿ ಪಿಒಪಿ ಹಾವಳಿ?: ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ಮಾರಾಟವನ್ನು ಜಿಲ್ಲೆಯಲ್ಲಿ ನಿಷೇಧಿಸಲಾಗಿದೆ. ಈ ಕುರಿತು ಜಿಲ್ಲಾಡಳಿತ ನಿಗಾ ವಹಿಸಿದೆಯಾದರೂ, ದಂಧೆಕೋರರು ಕದ್ದು ಮುಚ್ಚಿ ಪಿಒಪಿ ಮೂರ್ತಿ ಮಾರಾಟಕ್ಕೆ ಯತ್ನಿಸುವ ಸಾಧ್ಯತೆ ಇದೆ. ಕೆಲ ಸಾರ್ವಜನಿಕ ಗಣೇಶ ಮಂಡಳಿಯವರು ಮಹಾರಾಷ್ಟ್ರದ ಕೊಲ್ಲಾಪುರ ಮತ್ತಿತರ ಭಾಗಗಳಿಂದ 8, 10 ಅಡಿ ಎತ್ತರದ ಪಿಒಪಿ ಗಣೇಶನನ್ನು ತಂದು ಪ್ರತಿಷ್ಠಾಪಿಸಲು ತಯಾರಿ ನಡೆಸಿದ್ದಾರೆ ಎಂದು ಮಣ್ಣಿನ ಗಣಪತಿ ತಯಾರಿಸುವ ಕಲಾಕಾರರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಇಲಾಖೆ ಗಮನ ಹರಿಸಬೇಕಿದೆ.
ರಾಣೆಬೆನ್ನೂರ, ಬಂಕಾಪುರದಲ್ಲಿ ಜಪ್ತಿ:
ಪಿಒಪಿ ಗಣೇಶ ಮೂರ್ತಿ ಮಾರಾಟ ತಡೆಯಲು ಎಲ್ಲೆಡೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ರಾಣೆಬೆನ್ನೂರ ಹಾಗೂ ಬಂಕಾಪುರದಲ್ಲಿ ಸಂಗ್ರಹಿಸಿ ಇಟ್ಟಿದ್ದ ಪಿಒಪಿ ಮೂರ್ತಿಗಳನ್ನು ಜಪ್ತಿ ಮಾಡಲಾಗಿದೆ. ಪುಣೆಯಿಂದ ಕೈ, ಕಾಲು, ದೇಹದ ಪ್ರತ್ಯೇಕ ಬಿಡಿಭಾಗಗಳನ್ನು ತಂದು ರಾಣೆಬೆನ್ನೂರಿನಲ್ಲಿ ಇಟ್ಟಿದ್ದರು. ಅವುಗಳನ್ನು ಜಪ್ತಿ ಮಾಡಿ, ವಾಪಸ್ ಪುಣೆಗೆ ಕಳುಹಿಸಲಾಗಿದೆ. ಮಹಾರಾಷ್ಟ್ರದಿಂದ ಪಿಒಪಿ ಬರುವ ಶಂಕೆ ಇದ್ದು, ಟೋಲ್, ರಸ್ತೆಯಲ್ಲೇ ತಡೆಯುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದೇವೆ ಎಂದು ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಸುಧಾ ಎಂ.ಕೆ. ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಈ ವರ್ಷ ನಾವು ಸುಮಾರು 800 ಮಣ್ಣಿನ ಗಣೇಶನ ಮೂರ್ತಿ ತಯಾರಿಸಿದ್ದೇವೆ. 15 ದೊಡ್ಡ ಗಣೇಶನನ್ನು ಮಾಡಿದ್ದೇವೆ. ಮನೆಯ ಎಂಟು ಸದಸ್ಯರು ವರ್ಷ ಪೂರ್ತಿ ಇದೇ ಕೆಲಸ ಮಾಡುತ್ತೇವೆ. ಪಿಒಪಿ ಹಾವಳಿ ಹೆಚ್ಚಾಗಿರುವ ಕಾರಣ ಮಣ್ಣಿನ ಗಣೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇನ್ನೂ 150ಕ್ಕೂ ಹೆಚ್ಚು ಮೂರ್ತಿಗಳು ಬುಕ್ಕಿಂಗ್ ಆಗಿಲ್ಲ. ಈ ಬಗ್ಗೆ ಸರ್ಕಾರ ಕ್ರಮ ಜರುಗಿಸಬೇಕು. -ಕಾಳಮ್ಮ ಕೃಷ್ಣಪ್ಪ ಕಮ್ಮಾರ ಕಲಾವಿದೆ ದೇವಗಿರಿ