ಹಾವೇರಿ: ಓರಿಗಾಮಿ ತಂತ್ರವನ್ನು ಬಳಸಿಕೊಂಡು ಗಣಿತದ ಮಾದರಿಗಳನ್ನು ರಚಿಸಿ, ಗಣಿತದ ಸಿದ್ಧಾಂತಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಓರಿಗಾಮಿ ಹೊಸ ಶಿಕ್ಷಣ ನೀತಿಗೆ ಪೂರಕ ಎಂದು ವಿಜ್ಞಾನ ಗಣಿತದ ಸಂವಹನಕಾರ, ವಿಜ್ಞಾನ ಬರಹಗಾರ ಓರಿಗಾಮಿ ತಜ್ಞ ವಿ.ಎಸ್.ಎಸ್. ಶಾಸ್ತ್ರೀ ಹೇಳಿದರು.
ನಗರದ ಹುಕ್ಕೇರಿ ಮಠದ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ತು, ಶಾಲಾ ಶಿಕ್ಷಣ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ ಹಾವೇರಿ ಜಿಲ್ಲಾ ಘಟಕ ಹಾಗೂ ಹಾವೇರಿ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ತಾಲೂಕಿನ ಪ್ರೌಢಶಾಲಾ ಗಣಿತ ಶಿಕ್ಷಕರಿಗೆ ಆಯೋಜಿಸಿದ್ದ ಮೂರು ದಿನಗಳ ಓರಿಗಾಮಿ ಕೌಶಲ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೌಶಲ ಆಧಾರಿತ ಕಲಿಕೆ ಬೋಧನೆಯೇ, ಹೊಸ ಶಿಕ್ಷಣ ನೀತಿಯ ಧ್ಯೇಯವಾಗಿದೆ. ಓರಿ ಎಂದರೆ ಮಡಚು, ಗಾಮಿ ಎಂದರೆ ಕಾಗದ. ಕಾಗದವನ್ನು ಮಡಚುವ ಕೌಶಲ್ಯವೇ ಓರಿಗಾಮಿ ಎಂದು ಹೇಳಿದರು.
ಉದ್ಘಾಟನೆ ನೆರವೇರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರಿ ಮಾತನಾಡಿ, ಕಬ್ಬಿಣದ ಕಡಲೆಯಂತಿರುವ ಗಣಿತದ ಕಲಿಕೆಯನ್ನು ಓರಿಗಾಮಿ ಮೂಲಕ ಸುಲಭಗೊಳಿಸಬಹುದು. ಮೂರು ದಿನಗಳಲ್ಲಿ ಪಡೆದ ತರಬೇತಿಯ ಕೌಶಲದ ಪ್ರಯೋಜನ ಮಕ್ಕಳಿಗೆ ನೇರವಾಗಿ ತಲುಪಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಕುತೂಹಲ ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಬಿ.ಹಿರೇಮಠ ಮಾತನಾಡಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕದಿಂದ ಮುಂದಿನ ದಿನದಲ್ಲಿ ಪ್ರಖ್ಯಾತ ವಿಜ್ಞಾನಿಗಳನ್ನು ಕರೆಸಿ ವಿದ್ಯಾರ್ಥಿ ವಿಜ್ಞಾನಿ ಸಮಾಜದ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.
ಶಿಕ್ಷಣ ಸಂಯೋಜಕ ಓಂಪ್ರಕಾಶ ಯತ್ನಳ್ಳಿ, ತಾಲೂಕ ಗಣಿತ ಶಿಕ್ಷಕರ ಸಂಘದ ಅಧ್ಯಕ್ಷ ವಸಂತ ಮೆಳ್ಳಳ್ಳಿ ಹಾಗೂ ಬೆಳಗಾವಿ ವಿಕಸನ ಕೇಂದ್ರ ಅಧ್ಯಕ್ಷ ಸಂಜಯ ಮುಗದುಮ್ ಉಪಸ್ಥಿತರಿದ್ದರು.
ಕರಾವಿಪ ಜಿಲ್ಲಾ ಘಟಕದ ಕಾರ್ಯದರ್ಶಿ ಹಾಗೂ ಮೇವುಂಡಿ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ವೀರೇಶ ಗಡ್ಡದೇವರಮಠ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕ ಎಚ್.ಎಸ್. ಕಬ್ಬಿಣದಂತಿಮಠ ವಂದಿಸಿದರು. ಕಾರ್ಯಕ್ರಮದ ಸಂಚಾಲಕ ಜಿ.ಎಸ್ ಹತ್ತಿಮತ್ತೂರ ನಿರೂಪಿಸಿದರು.