ಹಾವೇರಿ: ವೀರವನಿತೆ ಒನಕೆ ಓಬವ್ವ ಅವರ ಶೌರ್ಯ, ಸಾಹಸ ಹಾಗೂ ಧೈರ್ಯ ಎಲ್ಲರಿಗೂ ಮಾದರಿಯಾಗಿದೆ. ನಗರದಲ್ಲಿ ಒನಕೆ ಓಬವ್ವ ಹೆಸರಿನ ಉದ್ಯಾನವನ ಅಭಿವೃದ್ಧಿಗೆ 40 ಲಕ್ಷ ರೂ. ಮಂಜೂರು ಮಾಡಲಾಗಿದೆ. ಮುಂದಿನ ಜಯಂತಿಯೊಳಗಾಗಿ ಮಾದರಿ ಉದ್ಯಾನವನ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಭರವಸೆ ನೀಡಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಾವೇರಿ ಜಿಲ್ಲಾ ಛಲವಾದಿ ಮಹಾಸಭಾ ಸಹಯೋಗದಲ್ಲಿ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒನಕೆ ಓಬವ್ವ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ, ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಕೇಂದ್ರ, ಒನಕೆ ಓಬ್ಬವ್ವ ಹೆಸರಿನಲ್ಲಿ ಶೌರ್ಯ ಪ್ರಶಸ್ತಿ ಹಾಗೂ ಒನಕೆ ಓಬವ್ವ ಅವರ ಜೀವನ ಕುರಿತು ಪಠ್ಯದಲ್ಲಿ ಅಳವಡಿಕೆ ಕುರಿತು ಬೇಡಿಕೆ ಸಲ್ಲಿಸಿದ್ದು, ಈ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು ಎಂದರು.
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಡಾ.ಆರ್.ಕಾವಲಮ್ಮ ಮಾತನಾಡಿ, ಒನಕೆ ಓಬ್ಬವ್ವ ಸ್ವಾಮಿನಿಷ್ಠೆ ಹಾಗೂ ಸಮಯಪ್ರಜ್ಞೆಯಿಂದ ಚಿರಪರಿಚಿತಳಾಗಿದ್ದಾಳೆ. ಸಮುದಾಯದ ಅಧಿಕಾರಿಗಳು ಸ್ವಾರ್ಥ ಬಿಟ್ಟು ಜನಾಂಗದ ಅಭಿವೃದ್ಧಿಗೆ ಒಗ್ಗೂಡಬೇಕು ಎಂದು ಹೇಳಿದರು.
ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ನೆಲ್ಲಿಕಟ್ಟಿ ಸಿದ್ದೇಶ ಉಪನ್ಯಾಸ ನೀಡಿದರು. ಮಾಜಿ ಶಾಸಕ ನೆಹರು ಓಲೇಕಾರ ಪ್ರಸ್ತಾವಿಕವಾಗಿ ಮಾತನಾಡಿದರು. ಗೊಟಗೋಡಿ ಜಾನಪದ ವಿವಿ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ ಮಾತನಾಡಿದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಒನಕೆ ಓಬವ್ವನವರ ಭಾವಚಿತ್ರದ ಮೆರವಣಿಗೆ ನಡೆಯಿತು.
ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಛಲವಾದಿ, ತಹಸೀಲ್ದಾರ್ ಶರಣಮ್ಮ, ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಮಲ್ಲೇಶಪ್ಪ ಮದ್ಲೇರ, ರಾಣೆಬೆನ್ನೂರ ಶಹರ ವೃತ್ತ ಸಿಪಿಐ ಡಾ.ಶಂಕರ ಎಸ್.ಕೆ., ಎಸ್.ಪಿ.ತಾವರಗಿ, ಎಸ್.ಎಚ್.ಹಂಸಭಾವಿ, ಡಾ.ನಿಂಗಪ್ಪ ಕಾಳೆ, ಎಚ್.ಕೆ.ರುದ್ರಪ್ಪ, ಡಾ.ಬಸವರಾಜ ಡಿ.ಸಿ., ಎಚ್.ವೈ.ಪೂಜಾರ, ಎಂ.ಎ.ಮುರಾರಿ, ಎನ್.ಬಿ.ಕಾಳೆ, ಡಾ.ನಿಲೇಶ ಎಮ್.ಎನ್, ಹತ್ತಿಮತ್ತೂರ ಉಪ ತಹಸೀಲ್ದಾರ ರವಿ ಭೂಗಾರ, ಡಾ.ಆರ್.ಬಿ.ದೊಡ್ಡಮನಿ, ಪಾಪಣ್ಣ ಕ್ಯಾತಣ್ಣನವರ, ಇತರರು ಪಾಲ್ಗೊಂಡಿದ್ದರು.
ಆರ್.ವಿ.ಚಿನ್ನಿಕಟ್ಟಿ ಸ್ವಾಗತಿಸಿದರು. ಮಹಾಸಭಾ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಸನದಿ ವಂದಿಸಿದರು.
ಹಲವರಿಗೆ ಸನ್ಮಾನ :
ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ, ನಿವೃತ್ತ ಜಿಲ್ಲಾ ಅಬಕಾರಿ ಅಧಿಕಾರಿ ಬಿ.ಡಿ.ಸಾವಕ್ಕನವರ, ಕುವೆಂಪು ವಿವಿ ನಿವೃತ್ತ ರಜಿಸ್ಟ್ರಾರ್ ಎಸ್.ಬಿ.ಕಮಲಾಕರ, ವೈದ್ಯ ಡಾ.ರಘುನಾಥ ಆಲದಕಟ್ಟಿ, ಒನಕೆ ಓಬವ್ವ ಮೂಲ ವಂಶಸ್ಥೆ ಸುವರ್ಣ ರಾಜಶೇಖರಯ್ಯ ಹಾಗೂ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.