ಜಿಲ್ಲೆ

ರಾಜ್ಯ ಸರ್ಕಾರದಿಂದ ದಲಿತರ ಕಣ್ಣಿಗೆ ಮಣ್ಣೆರಚುವ ತಂತ್ರ; ಗವಿಸಿದ್ದಪ್ಪ ದ್ಯಾಮಣ್ಣನವರ

ಹಾವೇರಿ: ಸುಪ್ರೀಂಕೋರ್ಟ್ ಆದೇಶವಿದ್ದರೂ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸದೇ ಹೊಸದಾಗಿ ಆಯೋಗ ರಚಿಸಲು ಮುಂದಾಗಿದೆ. ಈ ಮೂಲಕ ದಲಿತರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಒಳ ಮೀಸಲಾತಿ ಹೋರಾಟ ಸಮಿತಿಯ ಪ್ರಮುಖರಾದ ಗವಿಸಿದ್ದಪ್ಪ ದ್ಯಾಮಣ್ಣನವರ ಆರೋಪಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 30 ವರ್ಷಗಳಿಂದ ನಮ್ಮ ಸಮುದಾಯ ಸುದೀರ್ಘವಾಗಿ ಹೋರಾಟ ಮಾಡುತ್ತ ಬಂದಿದೆ. ಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿರುವುದು ನಮಗೆ ಬಲ ತಂದಿದೆ. ಈ ಆದೇಶ ನೀಡಿ ಮೂರು ತಿಂಗಳಾದರೂ ಸರ್ಕಾರ ಜಾರಿಗೆ ಮುಂದಾಗಲಿಲ್ಲ ಎಂದರು.

ಐದು ಗ್ಯಾರಂಟಿ ಜತೆಗೆ ಒಳಮೀಸಲಾತಿ ಜಾರಿಗೊಳಿಸುವುದಾಗಿ ಘೋಷಿಸಿದ್ದರು. ಒಂದೂವರೆ ವರ್ಷ ಕಳೆದರೂ ಚಕಾರ ಎತ್ತುತ್ತಿಲ್ಲ. ಈಗ ಮತ್ತೊಂದು ಆಯೋಗ ರಚಿಸಬೇಕೆಂದು ಸರ್ಕಾರ ಹೇಳುತ್ತಿದೆ. ಅವರೇ ರಚಿಸಿದ್ದ ಆಯೋಗದ ವರದಿ ಅವರಿಗೆ ಬೇಡವಾಯಿತೇ? ಚುನಾವಣೆ ಹಿನ್ನೆಲೆಯಲ್ಲಿ ಕಾಲಹರಣ ಮಾಡುವ ಹುನ್ನಾರ ನಡೆಸಿದೆ. ಸಿಎಂ ಸಿದ್ದರಾಮಯ್ಯ ಯಾರ ಒತ್ತಡಕ್ಕೂ ಮಣಿಯದೇ ಬೊಮ್ಮಾಯಿ ಅವರಂತೆ ದಿಟ್ಟ ನಿರ್ಧಾರ ತೆಗೆದುಕೊಂಡು ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಉಡಚಪ್ಪ ಮಾಳಗಿ, ಅಶೋಕ ಮರೆಣ್ಣನವರ, ಮಾರುತಿ ಸೊಟ್ಟಪ್ಪನವರ, ಪರಶುರಾಮ ಹರಪನಹಳ್ಳಿ, ಮೃತ್ಯುಂಜಯ ಮುಷ್ಠಿ, ಜಗದೀಶ ಹರಿಜನ, ಹನುಮಂತಗೌಡ ತಳಮನಿ, ಬಸವರಾಜ ಕಾಳೆ, ದುರ್ಗಪ್ಪ ಮಾದರ, ಇತರರಿದ್ದರು.