ಹಾವೇರಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (ವಾಕರಸಾ) ಸಂಸ್ಥೆಗೆ ಆರ್ಥಿಕ ಮುಗ್ಗಟ್ಟು ಉಂಟಾಗಿದ್ದು, ಸಂತ್ರಸ್ಥರಿಗೆ ಪರಿಹಾರ ಕೊಡಲೂ ಪರದಾಡುವಂತಾಗಿದೆ. ಪರಿಹಾರದ ಹಣ ವಸೂಲಿಗೆ ನ್ಯಾಯಾಲಯದಿಂದ ಬಸ್ ಜಪ್ತಿ ಮಾಡುವ ಹಂತಕ್ಕೆ ಬಂದು ನಿಂತಿದೆ. ಸಾರಿಗೆ ಸಂಸ್ಥೆಯ ಬಸ್ ಅಪಘಾತಗಳಲ್ಲಿ ಮೃತಪಟ್ಟ ಹಾಗೂ ಗಾಯಗೊಂಡ 900ಕ್ಕೂ ಅಧಿಕ ಪ್ರಕರಣಗಳಲ್ಲಿ ಒಟ್ಟು 56 ಕೋಟಿ ರೂ. ಪರಿಹಾರ ಕೊಡುವುದು ಬಾಕಿ ಉಳಿಸಿಕೊಂಡಿದೆ. ಸಂಸ್ಥೆಯ ಬಸ್‌ಗಳಿಂದ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಮೃತಪಟ್ಟು ಹಾಗೂ ಗಾಯಗೊಂಡವರಿಗೆ ವಿವಿಧ ನ್ಯಾಯಾಲಯಗಳು ಪರಿಹಾರ ನೀಡಲು ಆದೇಶಿಸಿದ್ದವು. ಇಂತಹ 900ಕ್ಕೂ ಅಧಿಕ ಪ್ರಕರಣಗಳಲ್ಲಿ ನಿಗಧಿತ ಅವಧಿಯಲ್ಲಿ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ, ಒಟ್ಟಾರೆ 56 ಕೋಟಿ ರೂ. ಬಾಕಿ ಇದೆ. ಉತ್ತರ ಕರ್ನಾಟಕದ 6 ಜಿಲ್ಲೆಗಳ 9 ವಿಭಾಗಗಳನ್ನು ಒಳಗೊಂಡಿರುವ ವಾಕರಸಾ ಸಂಸ್ಥೆಯಲ್ಲಿ 3 ಸಾವಿರಕ್ಕೂ ಅಧಿಕ ಬಸ್‌ಗಳಿವೆ. ಸಂಸ್ಥೆಯಲ್ಲಿ ಆದಾಯಕ್ಕಿಂದ ಖರ್ಚು ವೆಚ್ಚ ಹೆಚ್ಚಾಗುತ್ತಿದೆ. ಇದರಿಂದ ಆರ್ಥಿಕ ಪರಿಸ್ಥಿತಿ ಮುಗ್ಗರಿಸಿದೆ. ಇದೇ ಕಾರಣಕ್ಕೆ ಇಷ್ಟೊಂದು ಪರಿಹಾರದ ಮೊತ್ತ ಉಳಿದುಕೊಂಡಿದೆ. ಬಾಕ್ಸ್ ಹಾವೇರಿ ಘಟಕದ ಬಸ್ ಜಪ್ತಿ ಅಪಘಾತಗಳಲ್ಲಿ ಮೃತಪಟ್ಟವರ, ಗಾಯಗೊಂಡವರು ಕುಟುಂಬದವರಿಗೆ ಪರಿಹಾರವನ್ನು ಕಂತುಗಳಲ್ಲಿ ಪಾವತಿಸುವಂತೆ ನ್ಯಾಯಾಲಯ ಅವಕಾಶ ನೀಡುತ್ತಿದೆ. ಆದರೂ ಸಂಸ್ಥೆಗೆ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಂಸ್ಥೆಯ ಬಸ್‌ಗಳನ್ನೇ ಮುಟ್ಟುಗೋಲು ಹಾಕುವ ಸ್ಥಿತಿ ನಿರ್ಮಾಣವಾಗಿದೆ. 2018 ಅಕ್ಟೋಬರ್ 15ರಂದು ಕುಮಟಾದ 29 ವರ್ಷದ ಸೌಮ್ಯಾ ಭಟ್ಟ ಎಂಬುವರು ಕಡತೋಕಾದಿಂದ ಹೊನ್ನಾವರ ಕಡೆಗೆ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಆಗ ಧರ್ಮಸ್ಥಳದಿಂದ ಹಾವೇರಿಗೆ ಹೋಗುತ್ತಿದ್ದ ಬಸ್ ಹೊನ್ನಾವರದ ಎಮ್ಮೆಪೈಲ್ ಬಳಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಸೌಮ್ಯಾ ಭಟ್ಟರಿಗೆ ಗುದ್ದಿತ್ತು. ಆ ರಭಸಕ್ಕೆ ಶಿಕ್ಷಕಿ ಸೌಮ್ಯಾ ಭಟ್ಟ ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಹಾವೇರಿ ಘಟಕಕ್ಕೆ ಸೇರಿದ ಬಸ್ ಅದಾಗಿದ್ದು, ಸೌಮ್ಯಾ ಭಟ್ಟ ಅವರ ಪತಿ ದತ್ತಾತ್ರೇಯ ಭಟ್ಟ ಕಾನೂನು ಹೋರಾಟಕ್ಕೆ ಇಳಿದಿದ್ದರು. ಸತತ ಐದೂವರೆ ವರ್ಷ ಹೋರಾಟದ ನಂತರ ಮೃತರ ವಾರಸುದಾರರಿಗೆ 20 ಲಕ್ಷ ರೂ. ಪರಿಹಾರ ವಿತರಿಸುವಂತೆ ನ್ಯಾಯಾಲಯ ಎನ್‌ಡಬ್ಲ್ಯು ಕೆಆರ್‌ಟಿಸಿಗೆ ಆದೇಶಿಸಿತ್ತು. ಆದರೆ, ನಿಗಮದ ಅಧಿಕಾರಿಗಳು ಮಾತ್ರ ನೊಂದವರಿಗೆ ನ್ಯಾಯ ಒದಗಿಸಲು ಸಿದ್ಧರಿರಲಿಲ್ಲ.
ನ್ಯಾಯಾಲಯದ ಸಿಬ್ಬಂದಿ ಹಾವೇರಿಗೆ ತೆರಳಿ ಪರಿಹಾರ ಕೊಡುವಂತೆ ಘಟಕದ ವ್ಯವಸ್ಥಾಪಕರೊಂದಿಗೆ ಮಾತನಾಡಿದ್ದರು. ಆದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಹಾಗಾಗಿ, ನ್ಯಾಯಾಲಯದ ಆದೇಶದಂತೆ ಇತ್ತೀಚೆಗೆ ಹಾವೇರಿಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಸ್ ಅನ್ನು ಕುಮಟಾ ಬಳಿ ವಶಪಡಿಸಿಕೊಳ್ಳಲಾಗಿತ್ತು.
ಶಕ್ತಿ ಯೋಜನೆಯ 300 ಕೋಟಿ ರೂ. ಬಾಕಿ
ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಯಾದ ಬಳಿಕ ಈವರೆಗೆ ಸರ್ಕಾರದಿಂದ 300 ಕೋಟಿಗೂ ಅಧಿಕ ಹಣ ಬಾಕಿ ಉಳಿದಿದೆ. ಇದು ಕೂಡ ಸಂಸ್ಥೆಯ ಹೊರೆ ಹೆಚ್ಚಿಸಿದೆ.
ಕೋಟ್:
ಅಪಘಾತ ಪ್ರಕರಣಗಳಲ್ಲಿ 56 ಕೋಟಿ ರೂ. ಪರಿಹಾರ ಕೊಡುವುದು ಬಾಕಿ ಇದೆ. ಹಂತ ಹಂತವಾಗಿ ಪರಿಹಾರ ವಿತರಿಸಲಾಗುವುದು. ಪರಿಹಾರ ನೀಡುವ ಮೂಲಕ ಮುಟ್ಟುಗೋಲು ಹಾಕಿಕೊಂಡಿರುವ ಹಾವೇರಿ ಘಟಕದ ಬಸ್ ಅನ್ನು ಬಿಡಿಸಿಕೊಳ್ಳಲಾಗುವುದು.
> ಪ್ರಿಯಾಂಗಾ ಎಂ., ಎಂಡಿ, ವಾಕರಸಾ ಸಂಸ್ಥೆ, ಹುಬ್ಬಳ್ಳಿ