ಹಾವೇರಿ: ಬಸವಣ್ಣನವರ ಸಮಕಾಲೀನ ಚಾರಿತ್ರಿಕ ವೈರುಧ್ಯಗಳ ಸೂಕ್ಷ್ಮತೆಗಳನ್ನು ಅಭಿವ್ಯಕ್ತಿಸುವ ಗಟ್ಟಿತನವನ್ನು ‘ನುಡಿಯ ಎಡವಿತ್ತು ಕಲ್ಯಾಣ’ ನಾಟಕ ಕೃತಿ ಒಳಗೊಂಡಿದೆ ಎಂದು ಹಿರಿಯ ವಿದ್ವಾಂಸ, ಅಂಕಣಕಾರ ಡಾ.ಮಲ್ಲೇಪುರಂ ವೆಂಕಟೇಶ ಅಭಿಪ್ರಾಯಪಟ್ಟರು.
ನಗರದ ಗೆಳೆಯರ ಬಳಗ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹಿರಿಯ ಲೇಖಕ ಪ್ರೊ.ಕೋರಗಲ್ಲ ವಿರೂಪಾಕ್ಷಪ್ಪ ರಚನೆಯ ‘ನುಡಿಯ ಎಡವಿತ್ತು ಕಲ್ಯಾಣ’ ನಾಟಕ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಚನ ಚಳವಳಿಯ ಏಕಪಕ್ಷೀಯತೆ ಪಕ್ಕಕ್ಕಿಟ್ಟು ರಾಜಕಾರಣ, ಸಾಮಾಜಿಕ ಆಂದೋಲನದ ಭಿನ್ನ ಸ್ವರಗಳನ್ನು ಒಂದೇ ಹೆಣಿಗೆಯಲ್ಲಿ ಕೂಡಿಸಿಕೊಟ್ಟಿದೆ. ನಾಟಕದ ಇಡೀ 25 ಪಾತ್ರಗಳು ಸಂಭ್ರಮಕ್ಕೆ ಅವಕಾಶ ನೀಡದೇ, ವಿಷಾದದ ಗೆರೆಗಳನ್ನು ಮೂಡಿಸಿವೆ. ನಾಟಕ ರಂಗ ಪ್ರದರ್ಶನಗೊಳ್ಳಬೇಕು. ನಾಟಕದಲ್ಲಿನ 27 ಸನ್ನಿವೇಶಗಳು 8ರಿಂದ 10 ನಿಮಿಷಗಳಲ್ಲಿ ಪೂರ್ಣಗೊಳ್ಳಬೇಕು. ಆಗ ನಾಡನ್ನು ಮತ್ತಷ್ಟು ಗಟ್ಟಿಗೊಳಿಸಲು ಸಾಧ್ಯ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಸತೀಶ ಕುಲಕರ್ಣಿ, ಪ್ರೊ.ಕೋರಗಲ್ಲ ವಿರೂಪಾಕ್ಷಪ್ಪ ಕಥೆಗಾರರಾಗಿ, ಗುರುತಿಸಿಕೊಂಡಿದ್ದರೂ ಲಲಿತ ಪ್ರಬಂಧ, ಪ್ರವಾಸ, ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕ, ಜತೆಗೆ ಹಾವೇರಿ ಹುಕ್ಕೇರಿ ಮಠದ ಶ್ರೀ ಶಿವಲಿಂಗ ಸ್ವಾಮೀಜಿ ಕುರಿತು ಮಹಾಕಾವ್ಯ ಬರೆದಿದ್ದಾರೆ. ಪ್ರಸ್ತುತ ‘ನುಡಿಯ ಎಡವಿತ್ತು ಕಲ್ಯಾಣ’ ನಾಟಕ ಕೃತಿ ಮಹತ್ವದ ಮೈಲಿಗಲ್ಲು ಆಗಲಿದೆ ಎಂದರು.
ಕಥೆಗಾರ ಪ್ರೊ.ಮಾರುತಿ ಶಿಡ್ಲಾಪುರ ಮಾತನಾಡಿ, ವಚನ ಸಾಹಿತ್ಯದ ಸಮೂಹವನ್ನು ಕಟ್ಟಿದ ಬಸವಣ್ಣನವರ ಅಭಿಲಾಷೆಗಳನ್ನು ಮತ್ತು ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಬಿಜ್ಜಳನ ತುಡಿತಗಳನ್ನು ನಾಟಕ ಪ್ರಸ್ತುತ ಪಡಿಸುತ್ತದೆ ಎಂದರು.
ಹಳ್ಳೂರ ಪ್ರಕಾಶನದ ಬಸವರಾಜ ಹಳ್ಳೂರ ಮಾತನಾಡಿ, ನುಡಿಯ ಎಡವಿತ್ತು ಕಲ್ಯಾಣ ನಾಟಕ ಸಂಶೋಧನಾತ್ಮಕ ಮೌಲಿಕ ಅಧ್ಯಯನಯಕ್ಕೆ ಸಹಕರಿಸಬಲ್ಲದು ಎಂದರು.
ಸಮಾರಂಭದಲ್ಲಿ ಗೆಳೆಯರ ಬಳಗದ ವಿ.ಎಂ.ಪತ್ರಿ ಅಧ್ಯಕ್ಷತೆ ವಹಿಸಿದ್ದರು. ಡಾ.ಶ್ರೀಶೈಲ ಬ್ಯಾಡಗಿ, ಎಲ್.ಎನ್. ಪಾಟೀಲ, ಡಾ.ಆರ್.ಬಿ. ಮುಗದೂರ, ಪಿ.ಬಿ.ಮುದ್ದಿ, ಆರ್.ಎನ್. ದೇಶಪಾಂಡೆ, ಎಂ.ಆರ್. ಪ್ಯಾಟಿಮಠ, ಆರ್.ಎಸ್. ನರಗುಂದ, ಮೇಟಿ ಕೊಟ್ರಪ್ಪ, ವಿಶ್ವನಾಥ ವಾರಂಬಳ್ಳಿ, ನಂದಿನಿ ಕೋರಗಲ್ಲ, ಸಾಹಿತಿ ಕಲಾವಿದರ ಬಳಗ ಹಾಗೂ ಸಿಎಂಸಿ ಬ್ಯಾಂಕ್ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.
ತುಷಾರ ಮಳಗಿ ವಚನ ಗಾಯನ ಪ್ರಸ್ತುತಪಡಿಸಿದರು. ವಿರೂಪಾಕ್ಷ ಪಡಿಗೋದಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು. ಜಿ.ಎಂ. ಓಂಕಾರಣ್ಣನವರ ವಂದಿಸಿದರು.
ವೈಚಾರಿಕ ಪರಂಪರೆಯನ್ನು ಪ್ರತಿನಿಧಿಸುವ ನುಡಿಯ ಎಡವಿತ್ತು ಕಲ್ಯಾಣ ನಾಟಕ ಕೃತಿ ಪ್ರಸ್ತುತ ಸಮಕಾಲೀನ ಸಮಾಜಕ್ಕೆ ಹೊಸ ಸ್ವರೂಪ ನೀಡಬಲ್ಲದು. ಈ ನಾಟಕ ಮರಿ ಕಲ್ಯಾಣ ಖ್ಯಾತಿಯ ಹಾವೇರಿ ನೆಲದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.
- ಶ್ರೀ ಸದಾಶಿವ ಸ್ವಾಮೀಜಿ, ಹುಕ್ಕೇರಿ ಮಠ, ಹಾವೇರಿ
ಕೋಟ್
ಬಿಜ್ಜಳ ಮತ್ತು ಬಸವಣ್ಣನವರ ನಡುವಿನ ಆಪ್ತತೆಯನ್ನು ಪರಿಚಯಿಸುವ ನುಡಿಯ ಎಡವಿತ್ತು ಕಲ್ಯಾಣ ಕೃತಿ ನಾಟಕ ಮತ್ತು ರೂಪಕಗಳಲ್ಲಿ ಮೂಡಿಬರಲಿ. ಪ್ರೊ.ಕೋರಗಲ್ಲ ವಿರೂಪಾಕ್ಷಪ್ಪ ಅವರ ನಾಟಕ ರಚನೆಯ ಮೂಲಕ ತಮ್ಮ ಗಟ್ಟಿತನವನ್ನು ಉಳಿಸಿಕೊಂಡಿದ್ದಾರೆ.
- ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ, ಹೊಸಮಠ, ಹಾವೇರಿ