ಜಿಲ್ಲೆ

ಪ್ರತಿ ವರ್ಷ 80 ಲಕ್ಷ ಜನರ ಸಾವು; ತಂಬಾಕು ಉತ್ಪನ್ನ ಸೇವನೆ ಜೀವಕ್ಕೆ ಮಾರಕ; ಡಿಸಿ ಡಾ.ವಿಜಯಮಹಾಂತೇಶ ದಾನಮ್ಮನವರ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ತಂಬಾಕು ಉತ್ಪನ್ನಗಳ ಸೇವನೆಯಿಂದ ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು 80 ಲಕ್ಷ ಜನ ಮರಣ ಹೊಂದುತ್ತಿದ್ದಾರೆ. ಇದು ತುಂಬಾ ಅಪಾಯಕಾರಿ ಸೂಚನೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಎಚ್ಚರಿಕೆ ನೀಡಿದರು.
ನಗರದ ಮೈಲಾರ ಮಾಹಾದೇವಪ್ಪ ವೃತ್ತದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಇತರ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ತಂಬಾಕು ಮುಕ್ತ ಯುವ ಅಭಿಯಾನ-2.0 ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದರು.
ಸಿಗರೇಟ್ ಮತ್ತು ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳು ಉಂಟಾಗುತ್ತವೆ. ಗ್ಲೋಬಲ್ ಅಡಲ್ಟ್ ಟೊಬ್ಯಾಕೋ ಸರ್ವೇ ಹಾಗೂ ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ ಪ್ರಕಾರ 2016ರಲ್ಲಿ ದೇಶದಲ್ಲಿ ಪ್ರತಿಶತ 30ರಷ್ಟು ಜನರು ಸಿಗರೇಟ್ ಹಾಗೂ ಇನ್ನಿತರ ಮಾದಕ ವಸ್ತುಗಳ ಸೇವೆನೆ ಮಾಡುತ್ತಿರುವುದು ಪತ್ತೆಯಾಗಿದೆ.
ತಂಬಾಕು ಉತ್ಪನ್ನಗಳ ಸೇವನೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ದೇಶದಲ್ಲಿ ತಂಬಾಕು ಮುಕ್ತ ದೇಶವನ್ನಾಗಿ ಮಾಡಲು 2003ರಲ್ಲಿ ಕೋಟ್ಪಾ ಕಾಯ್ದೆ ಹಾಗೂ ನ್ಯಾಷನಲ್ ಟುಬ್ಯಾಕೋ ಕಂಟ್ರೋಲ್ ಫ್ರೋಗ್ರಾಮ್ ಕಾಯ್ದೆಗಳ ಮೂಲಕ ದೇಶದಲ್ಲಿ ತಂಬಾಕು ಸೇವನೆಯನ್ನು ನಿಯಂತ್ರಿಸಲು ಯೋಜನೆ ರೂಪಿಸಲಾಗಿದೆ. ಕೇವಲ ಕಾಯ್ದೆಗಳಿಂದ ಮಾದಕ ವಸ್ತುಗಳ ಸೇವನೆ ತಡೆಗಟ್ಟಲಾಗದು. ಈ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೇಳಿದರು.
ಜಿ.ಪಂ.ಉಪ ಕಾರ್ಯದರ್ಶಿ ಡಾ.ಎಸ್.ರಂಗಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ತಂಬಾಕು ನಿಯಂತ್ರಣಾಧಿಕಾರಿ ಡಾ.ಜಗದೀಶ ಪಾಟೀಲ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಉಮೇಶಪ್ಪ ಎಚ್., ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಟಿಎಚ್‌ಒ ಡಾ.ಪ್ರಭಾಕರ ಕುಂದೂರ, ಪ್ರಭಾವತಿ ಹಾವನೂರ, ಲತಾ, ಇತರರು ಪಾಲ್ಗೊಂಡಿದ್ದರು.
ಮಾನವ ಸರಪಳಿ:
ತಂಬಾಕು ಮುಕ್ತ ಯುವ ಅಭಿಯಾನ -2.0 ಜಾಥಾ ಮೈಲಾರ ಮಾಹದೇವಪ್ಪ ವೃತ್ತದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬಿದಿಗಳಲ್ಲಿ ಸಂಚರಿಸಿತು. ಹೊಸಮನಿ ಸಿದ್ದಪ ವೃತ್ತದಲ್ಲಿ ಮಾನವ ಸರಪಳಿ ರಚನೆಯೊಂದಿಗೆ ಕೊನೆಗೊಂಡಿತು.