ವಿಜಯವಾಣಿ ವಿಶೇಷ ಹಾವೇರಿ
ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯಾಗಿ 26 ವರ್ಷ ಕಳೆದರೂ ಈವರೆಗೆ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಂಡಿಲ್ಲ ಎಂಬ ಕೊರಗು ಜಿಲ್ಲೆಯ ಜನತೆಯಲ್ಲಿ ಯಾವಾಗಲೂ ಕಾಡುತ್ತಿರುತ್ತದೆ. ಈ ನಿಟ್ಟಿನಲ್ಲಿ ನೂತನ ಸಂಸದ ಬಸವರಾಜ ಬೊಮ್ಮಾಯಿ ಅವರ ಹೆಗಲ ಮೇಲೆ ಜಿಲ್ಲೆಯ ಜನತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಪ್ರಮುಖ ಬೇಡಿಕೆಗಳಾದ ಪ್ರತ್ಯೇಕ ಡಿಸಿಸಿ ಬ್ಯಾಂಕ್, ಕೈಗಾರಿಕೆಗಳನ್ನು ಆರಂಭಿಸುವ ಮೂಲಕ ಉದ್ಯೋಗ ಸೃಷ್ಟಿಸುವುದು, ಜಿಲ್ಲಾಕೇಂದ್ರ ಹಾವೇರಿ ನಗರಕ್ಕೆ ಅಗತ್ಯ ಮೂಲಸೌಲಭ್ಯ ಒದಗಿಸುವುದು, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ, ಕೃಷಿ ವಲಯ, ಸಹಕಾರ, ಶೈಕ್ಷಣಿಕ ಕ್ಷೇತ್ರ, ಮೂಲ ಸೌಕರ್ಯ ಒದಗಿಸುವ ಕೆಲಸಗಳು ಪ್ರಥಮ ಆದ್ಯತೆಯಲ್ಲಿ ಆಗಬೇಕಿದೆ.
ಮಾಜಿ ಮುಖ್ಯಮಂತ್ರಿಯಾಗಿರುವ ಬೊಮ್ಮಾಯಿ ರಾಜ್ಯ ಸರ್ಕಾರದ ಮೇಲೆ ಪ್ರಭಾವ ಬೀರುವಷ್ಟು ಸಾಮರ್ಥ್ಯ ಹೊಂದಿದ್ದಾರೆ. ಜತೆಗೆ ಕೇಂದ್ರದಲ್ಲಿ ತಮ್ಮದೇ ಸರ್ಕಾರ ರಚನೆಯಾಗುತ್ತಿರುವ ಕಾರಣ ಎರಡೂ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಜಿಲ್ಲೆಗೆ ಅಗತ್ಯವಿರುವ ಕೆಲಸ, ಯೋಜನೆಗಳನ್ನು ಸಮರೋಪಾದಿಯಲ್ಲಿ ಮಾಡುವ ಹೊಣೆಗಾರಿಕೆ ಇದೆ. ಅದರಲ್ಲೂ ಈ ಚುನಾವಣೆಯಲ್ಲಿ ಕ್ಷೇತ್ರವನ್ನು ಮಾದರಿಯನ್ನಾಗಿಸುವ ಭರವಸೆ ನೀಡಿರುವ ಕಾರಣ ಅವರ ಮೇಲೆ ಜವಾಬ್ದಾರಿ ಹೆಚ್ಚಾಗಿದೆ.
ಕೃಷಿ ಪ್ರಧಾನವಾದ ಹಾವೇರಿ ಜಿಲ್ಲೆಗೆ ಬಹುಮುಖ್ಯವಾಗಿ ಪ್ರತ್ಯೇಕ ಜಿಲ್ಲಾ ಮದ್ಯವರ್ತಿ ಸಹಕಾರ (ಡಿಸಿಸಿ) ಬ್ಯಾಂಕ್ ಸ್ಥಾಪಿಸಬೇಕು ಎಂಬ ಅನೇಕ ವರ್ಷಗಳ ಕನಸು ಕನಸಾಗೇ ಉಳಿದಿದೆ. ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಇರುವ ತೊಡಕುಗಳ ಅಧ್ಯಯನ ನಡೆಸಿ, ಕೂಡಲೇ ಬ್ಯಾಂಕ್ ಸ್ಥಾಪಿಸಬೇಕಿದೆ. ಈ ಮೂಲಕ ಕೃಷಿಕರಿಗೆ, ಹೈನುಗಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಬೇಕಿದೆ. ಕೃಷಿಕರಿಗೆ ಪ್ರೋತ್ಸಾಹ ನೀಡಬೇಕಿದೆ.
ಜಿಲ್ಲಾ ಕೇಂದ್ರದ ಸಮಗ್ರ ಅಭಿವೃದ್ಧಿ ಆಗಲಿ
ಹಾವೇರಿ ಜಿಲ್ಲೆಯಾಗಿ 26 ವರ್ಷಗಳೇ ಕಳೆದಿವೆ. ಇದರ ಜತೆಗೆ ಹೊಸ ಜಿಲ್ಲೆಗಳಾಗಿ ರೂಪುಗೊಂಡ ದಾವಣೆಗೆರೆ, ಕೊಪ್ಪಳ, ಗದಗ, ಮತ್ತಿತರ ಜಿಲ್ಲೆಗಳು ಬಹುಪಾಲು ಅಭಿವೃದ್ಧಿ ಕಂಡಿವೆ. ಈ ಜಿಲ್ಲೆಗಳಿಗೆ ಹೋಲಿಸಿದರೆ ಹಾವೇರಿ ಜಿಲ್ಲೆಯ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಹಾವೇರಿ ತಾಲೂಕಿನಲ್ಲಿ ತುಂಗಭದ್ರಾ, ವರದಾ ನದಿಗಳು ಹರಿದಿದ್ದು, 600ಕ್ಕೂ ಹೆಚ್ಚು ಎಕರೆ ವಿಸ್ತಾರವುಳ್ಳ ಹೆಗ್ಗೇರಿ ಕೆರೆ ಇದ್ದರೂ ಹಾವೇರಿ ನಗರಕ್ಕೆ 20, 30 ದಿನಕ್ಕೊಮ್ಮೆ ನೀರು ಪೂರೈಸುವ ದಾರಿದ್ರೃವಿದೆ. ಗುಣಮಟ್ಟದಿಂದ ಕೂಡಿದ 24/7 ಕುಡಿಯುವ ನೀರಿನ ಯೋಜನೆ, ಅವೈಜ್ಞಾನಿಕ ಚರಂಡಿ ವ್ಯವಸ್ಥೆ ಸರಿಪಡಿಸುವುದು, ಒಳಚರಂಡಿ ವ್ಯವಸ್ಥೆ ಸರಿಪಡಿಸುವುದು ಮೊದಲ ಆದ್ಯತೆಯಲ್ಲಿ ಆಗಬೇಕಿದೆ. ಅಮೃತ ಯೋಜನೆಯಡಿ ಬಿಡುಗಡೆಯಾಗಿರುವ 140 ಕೋಟಿ ರೂ. ಸಮರ್ಪಕವಾಗಿ ಬಳಕೆಯಾಗಬೇಕಿದೆ.
ಅಸಮರ್ಪಕ ಸಾರಿಗೆ ಸೌಲಭ್ಯದಿಂದ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಇದಕ್ಕೆ ತಿಲಾಂಜಲಿ ಇಡಬೇಕಿದೆ. ನಗರದ ಹೊರಗೆ ರಿಂಗ್ ರಸ್ತೆ ಆಗಬೇಕಿದೆ. ರಾಜಕಾರಣದಿಂದ ಹಿನ್ನಡೆ ಅನುಭವಿಸಿರುವ ಗಣಜೂರ ಕೈಗಾರಿಕಾ ವಲಯ ಸ್ಥಾಪನೆ ಜತೆಗೆ, ನೂತನ ಕೈಗಾರಿಕೆಗಳ ಆರಂಭಕ್ಕೆ ವಿಶೇಷ ಮುತುವರ್ಜಿ ವಹಿಸಬೇಕಿದೆ. ತಾವೇ ಆರಂಭಿಸಿದ್ದ ಹಾವೇರಿ ವಿಶ್ವವಿದ್ಯಾಲಯ ಇನ್ನೂ ಟೇಕಾಫ್ ಆಗಿಲ್ಲ. ಹೈನುಗಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಬೇಕಿದೆ.
ರಾಣೆಬೆನ್ನೂರಿಗೆ ಬೇಕು ರಿಂಗ್ ರಸ್ತೆ, ಸೇತುವೆ
ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡು ರಾಣೆಬೆನ್ನೂರ ರಿಂಗ್ ರಸ್ತೆ ನಿರ್ಮಾಣವಾಗಬೇಕಿದೆ. ರಾಣೆಬೆನ್ನೂರಿನಲ್ಲಿ ದೇವರಗುಡ್ಡ, ಗಂಗಾಪುರ, ಮೇಡ್ಲೇರಿ ರಸ್ತೆಯಲ್ಲಿ ರೈಲ್ವೆ ಹಳಿ ಹಾದು ಹೋಗಿದ್ದು, ಇದರಲ್ಲಿ ಈಗಾಗಲೇ ದೇವರಗುಡ್ಡ ರಸ್ತೆಗೆ ಮೇಲ್ಸೇತುವೆ ಕಾಮಗಾರಿ ನಡೆದಿದೆ. ಇನ್ನುಳಿದ ಎರಡು ರಸ್ತೆಗೆ ರೈಲ್ವೆ ಮೇಲ್ಸೇತುವೆ ಆಗಬೇಕಿದೆ. ಕೇಂದ್ರ ಸರ್ಕಾರದ ಅನುದಾನದಡಿ ಮೆಕ್ಕೆಜೋಳ ಸಂಸ್ಕರಣ ಘಟಕ ಆಗಬೇಕಿದೆ. ತುಂಗಭದ್ರಾ ನದಿಗೆ ಅಲ್ಲಲ್ಲಿ ಸೇತುವೆ ನಿರ್ಮಿಸಿ ನೀರಿನ ಸಂಗ್ರಹಿಸಬೇಕಿದೆ. ರಾಣೆಬೆನ್ನೂರ-ಶಿಕಾರಿಪುರ ರೈಲ್ವೆ ಯೋಜನೆ ತ್ವರಿತವಾಗಿ ಆರಂಭಿಸಬೇಕಿದೆ.
ರಟ್ಟಿಯಲ್ಲಿ ನದಿ ಜೋಡಣೆ ಆಗಲಿ
ರಟ್ಟಿಹಳ್ಳಿ ತಾಲೂಕಿನಲ್ಲಿ ತುಂಗಭದ್ರ ಮತ್ತು ಕುಮದ್ವತಿ ನದಿಗಳು ಹರಿಯುತ್ತಿದ್ದು, ಎರಡೂ ನದಿಗಳು ರೈತರ ಜೀವನಾಡಿಗಳಾಗಿವೆ. ಈ ಎರಡು ನದಿಗಳ ಜೋಡಣೆಯಿಂದ ತಾಲೂಕಿನ ಅನೇಕ ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ಸಹಾಯವಾಗಲಿದೆ. ಅರೆ ಮಲೆನಾಡು ಭಾಗವಾಗಿರುವ ರಟ್ಟಿಹಳ್ಳಿ ತಾಲೂಕು ಹೆಚ್ಚಾಗಿ ಕೃಷಿ ಪ್ರಧಾನ ತಾಲೂಕು ಆಗಿರುವುದರಿಂದ ಹೆಚ್ಚಿನ ನೀರಾವರಿಗೆ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದೆ. ನದಿಗಳ ಶುದ್ದೀಕರಣಕ್ಕೆ ಆದ್ಯತೆ ನೀಡಬೇಕಿದೆ.
ರಾಣೆಬೆನ್ನೂರ-ಶಿಕಾರಿಪುರ-ಶಿವಮೊಗ್ಗ ರೈಲ್ವೆ ಯೋಜನೆ ಕಾಮಗಾರಿಗೆ ರೈತರಿಂದ ಭೂಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಈ ಬಗ್ಗೆ ಅನೇಕ ಗೊಂದಲಗಳಿವೆ. ಈ ಬಗ್ಗೆ ರೈತರೊಂದಿಗೆ ಚರ್ಚಿಸಿ ಅವರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಪರಿಹಾರ ಸೂಚಿಸಬೇಕಿದೆ. ತಾಲೂಕಿನ ಯಾವುದೇ ಗ್ರಾಮಗಳಲ್ಲಿ ಸಂಸದರ ಅನುದಾನದಲ್ಲಿ ಬಸ್ ತಂಗುದಾಣ ಆಗಿಲ್ಲ. ಸಂಸದರ ನಿಧಿಯಿಂದ ತಾಲೂಕಿನಲ್ಲಿ ಬಸ್ ತಂಗುದಾಣ ನಿರ್ಮಿಸಬೇಕಿದೆ. ನದಿಗಳು ಹರಿಯುವ ಈ ತಾಲೂಕಿನಲ್ಲಿ ಕಾರ್ಖಾನೆಗಳು, ಉದ್ದಿಮೆಗಳನ್ನು ಆರಂಭಿಸಿ ಉದ್ಯೋಗವಕಾಶವನ್ನು ಒದಗಿಸುವ ಕೆಲಸವನ್ನು ಮಾಡಬೇಕಾಗಿದೆ.
ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಹೊಸ ಸ್ಪರ್ಷ
ಬ್ಯಾಡಗಿಯ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಗೆ ಇರುವ ತೊಡಕುಗಳನ್ನು ನಿವಾರಿಸಿ, ಮತ್ತಷ್ಟು ಹೊಸ ಸ್ಪರ್ಷ ನೀಡಬೇಕಿದೆ. ಹಿಂದಿನ ಸಂಸದ ಶಿವಕುಮಾರ ಉದಾಸಿ ಅವಧಿಯಲ್ಲಿ ಎಪಿಎಂಸಿ ಮಾರುಕಟ್ಟೆಗೆ ಬಂದುಹೋಗುವ ರೇಲ್ವೆ ಮೇಲ್ಸೆತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗಿತ್ತು. ಸದ್ಯ ಕಾಮಗಾರಿ ನಡೆದಿದ್ದರೂ ಯಾವಾಗ ಪೂರ್ಣಗೊಳ್ಳಲಿದೆ ಎನ್ನುವ ಅನುಮಾನ ಕಾಡುತ್ತಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಗುಣಮಟ್ಟ ಪರೀಕ್ಷೆ ಕೇಂದ್ರದ ಬೇಡಿಕೆ ಇನ್ನೂ ಈಡೇರಿಲ್ಲ. ರಾಷ್ಟ್ರೀಯ ಹೆದ್ದಾರಿ ಎನ್.ಎಚ್ 4 ಮೋಟೆಬೆನ್ನೂರು ಹಾಗೂ ಛತ್ರ ಗ್ರಾಮಗಳ ಬಳಿ ಒಳಸೇತುವೆ ಕಾಮಗಾರಿ ಸ್ಥಗಿತಗೊಂಡಿದೆ. ಎರಡೂ ಕಡೆಗೂ ಸರ್ವೀಸ್ ರಸ್ತೆಗಳು ನಿರ್ಮಾಣವಾಗಿಲ್ಲ.
ಹಿರೇಕೆರೂರಗೆ ಅಂಚೆ ಕಚೇರಿ, ಡಿಗ್ರಿ ಕಾಲೇಜ್ ಬೇಕು
ಈಗಿರುವ ಅಂಚೆ ಕಚೇರಿ ಬಸ್ ನಿಲ್ದಾಣದಿಂದ ಅರ್ಧ ಕಿಮೀ ದೂರವಿದೆ. ಹೊಸೂರ, ಬಾಳಂಬೀಡ ಪ್ಲಾಟಿನಿಂದ ಬರೊಬ್ಬರಿ 1 ಕಿ.ಮಿ ದೂರದಲ್ಲಿದೆ. ಪಟ್ಟಣದ ಪ್ರವಾಸಿ ಮಂದಿರದ ಪಕ್ಕದಲ್ಲಿ ಅನೇಕ ವರ್ಷಗಳಿಂದ ಅಂಚೆ ಕಚೇರಿಗೆ ಸ್ವಂತ ಸ್ಥಳ ನೀಡಲಾಗಿದ್ದು, ಕಟ್ಟಡಕ್ಕಾಗಿ ಅನುದಾನ ಮಂಜೂರಾಗಿತ್ತು. ಆದರೂ ಈ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಈ ಕೂಡಲೇ ಚಾಲನೆ ನೀಡಬೇಕಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆಲವು ಗ್ರಾಮಗಳ ಜಿಲ್ಲಾ, ರಾಜ್ಯ ಹೆದ್ದಾರಿಗಳ ಕ್ರಾಸ್ ಬಳಿ ಲೋಕಸಭಾ ಸದಸ್ಯರ ಅನುದಾನದಿಂದ ಬಸ್ ತಂಗುದಾಣ ನಿರ್ಮಾಣವಾಗಬೇಕಿದೆ. ತಾಲೂಕು ಕೇಂದ್ರದಿಂದ ಪ್ರಸಿದ್ಧ ಜೋಗ ಜಲಪಾತ, ಹೊನ್ನಾವರ, ಶಿರಸಿ, ಸಾಗರ ಹೀಗೆ ಅನೇಕ ಜಿಲ್ಲಾ ಮತ್ತು ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳು ಆಗಬೇಕಿದೆ. ಹಾಗೂ ರೈಲ್ವೆ ಮಾರ್ಗ, ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಬೇಕಿದೆ.
ಸವಣೂರಲ್ಲಿ ನೀರಾವರಿಗೆ ಒತ್ತು ನೀಡಿ
ಸವಣೂರು ತಾಲೂಕಿನ ಹತ್ತಿಮತ್ತೂರ ಹೋಬಳಿ ಮಾತ್ರ ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆಯಾದರೂ, ಈ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ, ಮುಖ್ಯಮಂತ್ರಿಯಾಗಿ ಆಯ್ಕೆಯಾದ್ದರಿಂದ ತಾಲೂಕಿನ ಅಭಿವೃದ್ಧಿಯತ್ತ ಗಮನಹರಿಸುವ ನಿರೀಕ್ಷೆ ಇದೆ. ಮುಖ್ಯವಾಗಿ ಎಲ್ಲ ನೀರಾವರಿ ಯೋಜನೆಗಳು ಪೂರ್ಣಗೊಂಡು, ಕೆರೆ ತುಂಬಿಸುವ ಕಾರ್ಯ ಆಗಬೇಕಿದೆ.
ಬೆಳೆಹಾನಿ, ಬೆಳೆವಿಮೆ ಜಮಾವಣೆಯಲ್ಲಿ ಈ ಬಾರಿ ಹಿನ್ನಡೆಯಾಗಿದ್ದು, ಕ್ಷೇತ್ರದ ಜನರ ನಿರೀಕ್ಷೆಯಂತೆ ರಾಜ್ಯ ಸರ್ಕಾರ, ಕೇಂದ್ರದ ಸೌಲಭ್ಯಗಳನ್ನು ತಲುಪಿಸುತ್ತಿಲ್ಲ. ಈ ಕುರಿತು ತನಿಖೆಗೆ ಸಹ ಮುಂದಾಗುವದು ಅವಶ್ಯವಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಪ್ರಧಾನಮಂತ್ರಿ ಗ್ರಾಮ ಅಭಿವೃದ್ಧಿ ಯೋಜನೆಯಡಿ ಕೇಂದ್ರ ಸ್ಥಾನ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿಪಡಿಸಬೇಕಿದೆ.
ಹಾನಗಲ್ಲಗೆ ಬೇಕು ಸಂಸ್ಕರಣಾ ಘಟಕ
ಹಾನಗಲ್ಲ ತಾಲೂಕಿಗೆ ತೋಟಗಾರಿಕೆ ಬೆಳೆಗಳ ಅಭಿವೃದ್ಧಿಗೆ ಪೂರಕವಾದ ಮಾವು, ಮತ್ತಿತರ ಬೆಳೆಗಳ ಆಹಾರ ಸಂಸ್ಕರಣ ಘಟಕಗಳ ಅಗತ್ಯವಿದೆ. ಮಾವು ಬೆಳೆಯ ಅಗತ್ಯ ಅಧ್ಯಯನ, ರೈತರಿಗೆ ಪೂರಕ ಮಾಹಿತಿ ನೀಡುವ ಕಾರ್ಯ ಆಗಬೇಕಿದೆ. ನೀರಾವರಿ ಯೋಜನೆಗಳು ಸಮರ್ಪಕವಾಗಿ ಆಗಬೇಕಿದೆ.
ಜಾನಪದ ವಿವಿ ಅಭಿವೃದ್ಧಿ
ಬೊಮ್ಮಾಯಿ ಅವರ ಕನಸಿನ ಕೂಸು ವಿಶ್ವದ ಏಕೈಕ ಜಾನಪದ ವಿವಿ ಇನ್ನೂ ಅಂಬೆಗಾಲು ಇಡುತ್ತಿದ್ದು, ಇದಕ್ಕೆ ಹೆಚ್ಚಿನ ಅನುದಾನ, ಅಗತ್ಯ ಸಿಬ್ಬಂದಿ ನೇಮಕ ಪ್ರಕ್ರಿಯೆ ಮಾಡುವ ಮೂಲಕ ಮುಖ್ಯವಾಹಿನಿಗೆ ತರುವ ಕೆಲಸವನ್ನೂ ಬೊಮ್ಮಾಯಿ ಅವರು ಮಾಡಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಮನ್ವಯದೊಂದಿಗೆ ಜಾನಪದ ವಿವಿಗೆ ಹೈಟೆಕ್ ಸ್ಪರ್ಷ ನೀಡಬೇಕಿದೆ.
ಮಾಹಿತಿ: ಜಿಲ್ಲೆಯ ಎಲ್ಲ ತಾಲೂಕು ವರದಿಗಾರರು ಬಾಕ್ಸ್
ಮಹತ್ವದ ಬೇಡಿಕೆಗಳು