ಜಿಲ್ಲೆ

ಗುಡಿಸಲಕೊಪ್ಪದಲ್ಲಿ ಕೈಗಾರಿಕೆ ಸ್ಥಾಪಿಸಿ, ಉದ್ಯೋಗ ಸೃಷ್ಟಿಸಿ; ನೀರಲಗಿ ಉತ್ಸವದಲ್ಲಿ ಎಂ.ಎಸ್.ಕೋರಿಶೆಟ್ಟರ್ ಮನವಿ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ತುಂಗಭದ್ರಾ ಮತ್ತು ವರದಾ ನದಿ ದಡದಲ್ಲಿರುವ ನೀರಲಗಿ ಗ್ರಾಮವು ಸಮಗ್ರ ಅಭಿವೃದ್ಧಿ ಹೊಂದಲಿ. ಈ ಗ್ರಾಮದ ಪಕ್ಕದಲ್ಲಿರುವ ಗುಡಿಸಲಕೊಪ್ಪ ಗ್ರಾಮದಲ್ಲಿ 170 ಎಕರೆ ಸರ್ಕಾರಿ ಭೂಮಿ ಇದೆ. ಈ ಸ್ಥಳದಲ್ಲಿ ಸರ್ಕಾರ ಒಂದು ಬೃಹತ್ ಕೈಗಾರಿಕೆ ಸ್ಥಾಪಿಸುವ ಮೂಲಕ ಈ ಭಾಗದ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಕೋರಿಶೆಟ್ಟರ್ ಸರ್ಕಾರಕ್ಕೆ ಮನವಿ ಮಾಡಿದರು.

ತಾಲೂಕಿನ ನೀರಲಗಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ನೀರಲಗಿ ಉತ್ಸವ ಮತ್ತು ಪಂಡಿತ್ ಪುಟ್ಟರಾಜ ಗವಾಯಿಗಳ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಚೈನಾದಂತೆ ನಮ್ಮ ದೇಶದ ಗ್ರಾಮಗಳು ಕೂಡ ಕೈಗಾರಿಕೆ, ಉದ್ಯಮಗಳಲ್ಲಿ ಬೆಳವಣಿಗೆ ಆಗಬೇಕು. ಈ ಭಾಗದ ಲೋಕಸಭಾ ಸದಸ್ಯರು ಮತ್ತು ವಿಧಾನಸಭೆಯ ಸದಸ್ಯರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಡ ಹೇರಿ ಜಾರಿಗೊಳಿಸಬೇಕು ಎಂದರು.

ಸಮಾರಂಭದಲ್ಲಿ ನೀರಲಗಿಯ ಶ್ರೀ ಬಸವರಾಜ ಸ್ವಾಮೀಜಿ, ಬೆಳ್ಳಟ್ಟಿಮಠ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜ ಸ್ವಾಮೀಜಿ ಹಾಗೂ ಶಿರಹಟ್ಟಿಯ ಶ್ರೀ ಫಕ್ಕೀರೇಶ್ವರ ಸಿದ್ದರಾಮೇಶ್ವರ ಸ್ವಾಮೀಜಿ ಅವರ ನಾಣ್ಯಗಳ ತುಲಾಭಾರ ಮಾಡಲಾಯಿತು.