ಹಾವೇರಿ: ಜಿಲ್ಲೆಯ ನ್ಯಾಯಾಲಯಗಳಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಇತ್ಯರ್ಥಕ್ಕೆ ಗುರುತಿಸಿದ್ದ 63,372 ಪ್ರಕರಣಗಳಲ್ಲಿ 46,832 ಪ್ರಕರಣಗಳು ಇತ್ಯರ್ಥಗೊಂಡಿವೆ. ಒಟ್ಟು 36,34,51,746 ರೂ. ಮೊತ್ತದ ರಾಜಿಯಾಗಿದೆ.
ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಬಾಕಿ ಇರುವ ಇತ್ಯರ್ಥಕ್ಕೆ ಗುರುತಿಸಲಾದ 8,052 ಪ್ರಕರಣಗಳ ಪೈಕಿ 5,423 ಪ್ರಕರಣಗಳು ಇತ್ಯರ್ಥಗೊಂಡಿದ್ದು, 24,28,50,865 ರೂ. ರಾಜಿಯಾಗಿದೆ. ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಇತ್ಯರ್ಥಕ್ಕೆ ಗುರುತಿಸಲಾದ 55,320 ಪ್ರಕರಣಗಳಲ್ಲಿ 41,409 ಪ್ರಕರಣಗಳು ಇತ್ಯರ್ಥಗೊಂಡಿದ್ದು, 12,06,00,881 ರೂ. ಮೊತ್ತದ ರಾಜಿಯಾಗಿದೆ.
ಜಿಲ್ಲಾ ವಕೀಲರ ಸಂಘ, ಜಿಲ್ಲೆಯ ಎಲ್ಲ ತಾಲೂಕು ವಕೀಲರ ಸಂಘಗಳು, ಹಾವೇರಿ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ಅಭಿಯೋಜನೆ ಇಲಾಖೆ, ಆರಕ್ಷಕ ಇಲಾಖೆಯವರು ಹಾಗೂ ಇತರೆ ಇಲಾಖೆಯವರು ಹಾಗೂ ಕಕ್ಷಿಗಾರರ ಸಹಕಾರದೊಂದಿಗೆ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಯಾಗಿ ಜರುಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕೆ.ಸಿ.ಸದಾನಂದಸ್ವಾಮಿ ತಿಳಿಸಿದ್ದಾರೆ.
ಆರು ದಂಪತಿ ರಾಜಿ
ರಾಷ್ಟ್ರೀಯ ಅದಾಲತ್‌ನಲ್ಲಿ ಆರು ಕೌಟುಂಬಿಕ ಪ್ರಕರಣಗಳಲ್ಲಿ ದಂಪತಿಗಳು ರಾಜಿ ಮಾಡಿಕೊಂಡಿದ್ದಾರೆ. ಹಾವೇರಿ ನ್ಯಾಯಾಲಯದಲ್ಲಿ ನಾಲ್ಕು ಹಾಗೂ ಹಾನಗಲ್ಲ ನ್ಯಾಯಾಲಯದಲ್ಲಿ ಎರಡು ಕೌಟುಂಬಿಕ ಪ್ರಕರಣಗಳಲ್ಲಿ ದಂಪತಿ ರಾಜಿ ಮಾಡಿಕೊಂಡು ಮತ್ತೆ ಒಂದಾಗಿದ್ದಾರೆ.