ಜಿಲ್ಲೆ

ನರೇಗಾ ಯೋಜನೆ ಮಾಹಿತಿ ಜಾಗೃತಿ ರಥಕ್ಕೆ ಸಿಇಒ ಚಾಲನೆ

ಹಾವೇರಿ: ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಸೋಮವಾರ ಗ್ರಾಮೀಣ ಭಾಗದ ಪ್ರತಿ ಮನೆ ಮನೆಗೆ ಭೇಟಿ ನೀಡಿ, ನರೇಗಾ ಯೋಜನೆಯ ಮಾಹಿತಿ ತಲುಪಿಸುವ ಜಾಗೃತಿ ರಥಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಚಾಲನೆ ನೀಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಲು ಅ.2ರಿಂದ ಒಂದು ತಿಂಗಳ ಕಾಲ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಉದ್ಯೋಗಖಾತರಿ ನಡಿಗೆ ಸಬಲತೆಯೆಡೆಗೆ’ ಅಭಿಯಾನ ಆರಂಭಿಸಲಾಗಿದೆ. ರೈತರು ತಮಗೆ ಬೇಕಾದ ಕಾಮಗಾರಿಗಳನ್ನು ಅನುಷ್ಠಾನ ಮಾಡಿಕೊಳ್ಳಲು ಮೊಬೈಲ್ ಮತ್ತು ಇಲಾಖೆಯ ವೆಬ್‌ಸೈಟ್‌ನಲ್ಲಿ ನೋಂದಾಯಿಸಲು ಅನುವು ಮಾಡಲಾಗಿದೆ. ಈ ಸೌಲಭ್ಯದಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.
ಜಾಗೃತಿ ಮೂಡಿಸುವ ಕರಪತ್ರವನ್ನು ಸಿಇಒ ಬಿಡುಗಡೆಗೊಳಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿ.ಪಂ.ಅಧಿಕಾರಿಗಳಾದ ಕುಮಾರ ಮಣ್ಣವಡ್ಡರ, ಎಚ್.ವೈ.ಮೀಶಿ, ಜಿಲ್ಲಾ ಬ್ಯಾಂಕ್ ವ್ಯವಸ್ಥಾಪಕ ಆರ್.ಅಣ್ಣಯ್ಯ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಇತರರು ಇದ್ದರು.