ಜಿಲ್ಲೆ

ನಾಗೇಂದ್ರನಮಟ್ಟಿ ಸುತ್ತಮುತ್ತ ಚಿರತೆ ಆತಂಕ; ಬೀದಿನಾಯಿ, ಆಕಳ ಮೇಲೆ ಕಣ್ಣು

ಹಾವೇರಿ: ಇಲ್ಲಿನ ನಾಗೇಂದ್ರನಮಟ್ಟಿ, ಅಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆಯ ಓಡಾಟ ಶುರುವಾಗಿದ್ದು, ಇಲ್ಲಿನ ಜನ ನಿರಾತಂಕವಾಗಿ ಓಡಾಡಲು ಹೆದರುತ್ತಿದ್ದಾರೆ.

ನಾಗೇಂದ್ರನಮಟ್ಟಿ ಬಳಿ ಹೊಲದಲ್ಲಿ ಚಿರತೆ ಓಡಾಡಿದ್ದನ್ನು ಜನ ಕಂಡಿದ್ದಾರೆ. ಪಕ್ಕದಲ್ಲೇ ಜಿಂಕೆ ಮರಿಯೊಂದನ್ನು ತಿಂದು ಹಾಕಿದ್ದನ್ನು ಕಂಡು ಗಾಬರಿಗೊಂಡಿದ್ದಾರೆ. ಕಬ್ಬು ಬೆಳೆದಿರುವ ಪ್ರದೇಶದಲ್ಲಿ ಚಿರತೆಗಳು ಹೆಚ್ಚಾಗಿ ಓಡಾಡುತ್ತಿವೆ. ಕಾಡು ಬಿಟ್ಟು ನಾಡಿಗೆ ಬರುತ್ತಿರುವ ಚಿರತೆ ಹಾವಳಿ ತಡೆಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕಿದೆ. ಕಾಟೇನಹಳ್ಳಿ, ಕುಳೇನೂರ ಬಳಿ ಬೋನು ಇಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಗಡಿ ಬಳಿ ಜೋಡಿ ಚಿರತೆ ಓಡಾಡಿದ್ದ ವಿಡಿಯೋ ಎಂದು ಕೆಲವರು ವಿಡಿಯೋ, ಫೋಟೋ ಹರಿಬಿಟ್ಟಿದ್ದಾರೆ. ಇದರಿಂದ ಜನ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಪರಿಶೀಲಿಸಿ, ಸೂಕ್ತ ಕ್ರಮ ಜರುಗಿಸಬೇಕಿದೆ.