ಹಾವೇರಿ: ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲೆಡೆ ಸಡಗರ, ಸಂಭ್ರಮ ಕಂಡುಬಂತು. ಮಹಿಳೆಯರು, ಮಕ್ಕಳು ಸೇರಿದಂತೆ ಮನೆಮಂದಿಯಲ್ಲ ನಾಗ ದೇವರಿಗೆ ಹಾಲೆರೆದು, ಪಂಚಮಿ ಉಂಡಿ ಸವಿದರು. ಬುಧವಾರ ರೊಟ್ಟಿ ಹಬ್ಬ ಮಾಡಿದ್ದ ಜನರು ಗುರುವಾರ ದೇವಸ್ಥಾನ, ಶಾಲೆ, ಕಲ್ಯಾಣ ಮಂಟಪದ ಆವರಣದಲ್ಲಿರುವ ಬನ್ನಿ ಮಹಾಕಾಳಿ ಹಾಗೂ ನಾಗದೇವರಿಗೆ ಹಾಲೆರೆದು ಭಕ್ತಿ ಸಮರ್ಪಿಸಿದರು. ಪಂಚಮಿ ಹಿನ್ನೆಲೆಯಲ್ಲಿ ಸಿದ್ಧಪಡಿಸಿದ್ದ ಬಗೆಬಗೆಯ ಉಂಡಿಗಳನ್ನು ಸೇವಿಸಿದರು. ಶುಕ್ರವಾರ ಹೊಳಿ ಹಬ್ಬ ನಡೆಯಲಿದ್ದು, ಹೊಳೆ, ಕೆರೆಯಂಗಳಕ್ಕೆ ತೆರಳಿ ಪೂಜೆಗೈದು ಎಡೆ ಇಟ್ಟು ಬರುವ ಪದ್ಧತಿ ಇದೆ. ಕೆಲವರು ಶುಕ್ರವಾರವೂ ನಾಗದೇವರಿಗೆ ಹಾಲೆರೆಯುವ ಹಬ್ಬ ಮಾಡಲಿದ್ದಾರೆ. ಭಾನುವಾರದ ವರೆಗೆ ವಿವಿಧ ಪೂಜೆ, ಆಚರಣೆ ಮೂಲಕ ಹಬ್ಬ ನಡೆಯಲಿದೆ.
ಕಳೆದ ಮೂರು ದಿನಗಳಿಂದ ಪಂಚಮಿ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಪೂಜೆ, ಕಿರಾಣಿ, ಮತ್ತಿತರ ಸಾಮಗ್ರಿ ಖರೀದಿಯಲ್ಲಿ ತೊಡಗಿರುವ ಜನತೆ ಹಬ್ಬಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಗುರುವಾರವೂ ಮಣ್ಣಿನ ನಾಗಪ್ಪ, ಬಟ್ಟೆ, ಹಣ್ಣು, ಹೂವು ಖರೀದಿಯಲ್ಲಿ ನಿರತರಾಗಿದ್ದು ಕಂಡುಬಂತು.