ಜಿಲ್ಲೆ

ರಾಜ್ಯ ಬಜೆಟ್‌ನಲ್ಲಿ ಪಿಂಜಾರ ಸಮಾಜದ ಕಡೆಗಣನೆ ಆರೋಪ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ಮಂಡಿಸಿದ 2025-26ನೇ ಸಾಲಿನ ಆಯವ್ಯಯದಲ್ಲಿ ನದಾಫ್/ಪಿಂಜಾರ ಸಮಾಜಕ್ಕೆ ಯಾವುದೇ ಅನುದಾನ ಕೊಟ್ಟಿಲ್ಲ. ಸರ್ವರಿಗೂ ಸಮಪಾಲು ಸಮಬಾಳು ಎನ್ನುವ ಸಿಎಂ ಅಲ್ಪ ಸಂಖ್ಯಾತರಲ್ಲಿ ಅತ್ಯಂತ ಹಿಂದುಳಿದ ನದಾಫ್ ಸಮುದಾಯದವರಿಗೆ ನ್ಯಾಯದೊರಕಿಸುವಲ್ಲಿ ವಿಫಲವಾಗಿದೆ ಎಂದು ರಾಜ್ಯ ನದಾಫ್/ಪಿಂಜಾರ ಸಂಘದ ಜಿಲ್ಲಾಧ್ಯಕ್ಷ ಆರ್.ಜಿ ಗುಗೇರಿ ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಜೆಟ್ ಪೂರ್ವಭಾವಿ ಸಭೆಯನ್ನು ಸಿಎಂ ಅಧ್ಯಕ್ಷತೆಯಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಸಂಘಟನೆಗಳು ಹಾಗೂ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಭಾಗಿಯಾಗಿ ರಾಜ್ಯ ಬಜೆಟ್‌ನಲ್ಲಿ ಪಿಂಜಾರ ಸಮಾಜಕ್ಕೆ ಅನುದಾನ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿಗಳನ್ನು ಪರಿಗಣಿಸಲಾಗಿಲ್ಲ. ರಾಜ್ಯದಲ್ಲಿ ಪಿಂಜಾರ ಸಮುದಾಯದ ಸುಮಾರು 25 ಲಕ್ಷ ಜನಸಂಖ್ಯೆ ಇದೆ.

ನಮ್ಮ ಸಮಾಜದವರು ಅರೆ ಅಲೆಮಾರಿಗಳಾಗಿದ್ದು, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿರುತ್ತದೆ. ಆದರೂ ಸರ್ಕಾರ ನಮ್ಮ ಸಮಾಜದ ಅಭಿವೃದ್ಧಿ ಮರೆತಿದೆ ಎಂದು ಆರೋಪಿಸಿದ್ದಾರೆ.