ಜಿಲ್ಲೆ

ಸಾರ್ವಜನಿಕ ಶೌಚಗೃಹ ಮುಕ್ತಗೊಳಿಸಲು ಆಗ್ರಹ; ಹಾವೇರಿ ನಗರಸಭೆ ಸದಸ್ಯರಿಂದ ಪ್ರತಿಭಟನೆ

ಹಾವೇರಿ: ಸ್ಥಳೀಯ ನಗರಸಭೆ ವತಿಯಿಂದ ನಿರ್ಮಿಸಿರುವ ಹಲವು ಶೌಚಗೃಹಗಳ ಕಾಮಗಾರಿ ಪೂರ್ಣಗೊಂಡಿದ್ದರೂ ಬೀಗ ಹಾಕಲಾಗಿದ್ದು, ಈ ಕೂಡಲೇ ಪೂರ್ಣಗೊಂಡಿರುವ ಸಾರ್ವಜನಿಕ ಶೌಚಗೃಹಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ನಗರಸಭೆಯ ಕೆಲ ಸದಸ್ಯರು ಹಾಗೂ ಸಾರ್ವಜನಿಕರು ನಗರದಲ್ಲಿ ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.

ನಗರದ ಎಂ.ಜಿ ರಸ್ತೆಯ ಪಾದಗಟ್ಟಿ ಬಳಿ ಕುಳಿತು ನಗರಸಭೆ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎಂ.ಜಿ ರಸ್ತೆ ಮಾರುಕಟ್ಟೆ ಪ್ರದೇಶವಾದ ಕಾರಣ ಇಲ್ಲಿಗೆ ನಿತ್ಯವೂ ಸಾವಿರಾರು ಜನ ಬರುತ್ತಾರೆ. ಮಹಿಳೆಯರಿಗೆ ಶೌಚಕ್ಕೆ ತೆರಳಲು ತೀವ್ರ ತೊಂದರೆಯಾಗುತ್ತಿದೆ. ಈ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದರು.

ಸ್ವಚ್ಛ ಭಾರತ ಮಿಶನ್ ಅಡಿ ನಗರಸಭೆಯಿಂದ ಏಳು ಸಾರ್ವಜನಿಕ ಶೌಚಗೃಹಗಳನ್ನು ನಿರ್ಮಿಸಲಾಗುತ್ತಿದೆ. ಎರಡು ಶೌಚಗೃಹಗಳ ಕಾಮಗಾರಿ ಪೂರ್ಣಗೊಂಡಿದೆ. ಇವುಗಳ ಬಳಕೆಗೆ ಅನುಕೂಲ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ನಗರಸಭೆ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ಇದರಿಂದಾಗಿ ಕಿಡಿಗೇಡಿಗಳು ಗಾಜು, ಮೆಟ್ಟಿಲುಗಳನ್ನು ಹಾಳು ಮಾಡುತ್ತಿದ್ದಾರೆ. ಕಟ್ಟಡ ಹಾಳಾಗುವ ಮೊದಲೇ ಸಾರ್ವಜನಿಕರಿಗೆ ಉಪಯೋಗಕ್ಕೆ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ನಗರಸಭೆ ಸದಸ್ಯರಾದ ಮಂಜುನಾಥ ಬಿಷ್ಟಣ್ಣನವರ, ರೇಣುಕಾ ಪುತ್ರನ್, ಬಾಬುಸಾಬ ಮೋಮಿನಗಾರ, ಶಿವರಾಜ ಮತ್ತಿಹಳ್ಳಿ, ವೆಂಕಟೇಶ ಬಿಜಾಪೂರ, ಉಳಿವೆಪ್ಪ ಹಲಗಣ್ಣನವರ, ರಿಯಾಜಹ್ಮದ ಶಿಡಗನಾಳ, ಇಮಾಮ್ ಮೂಗದೂರ, ಇಬ್ರಾಹಿಂ ದಾವಣಗೆರೆ, ಬಸಯ್ಯ ಹಿರೇಮಠ, ರಾಜೇಶ ಕಾಶಪ್ಪನವರ, ನಾಗರಾಜ ಕೂಲಿ, ಮೂರ್ತಿ ಡಿ., ಇತರರಿದ್ದರು.