ಜಿಲ್ಲೆ

ಬೊಮ್ಮಾಯಿ ಗೆದ್ದರೆ ರಾಜ್ಯದ ನೀರಾವರಿಗೆ ಸಹಕಾರಿ; ನೀವು ಮತ ಹಾಕುವುದು ಕೇಂದ್ರ ಸಚಿವರಿಗೆ ಎಂಬುದನ್ನು ಮರೆಯದಿರಿ; ಸಂಸದ ಪ್ರತಾಪ ಸಿಂಹ ಹೇಳಿಕೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಮೇಕೆದಾಟು, ಮಹದಾಯಿ, ಕಳಸಾ ಬಂಡೂರಿ ನಾಲಾ ಯೋಜನೆ ಸೇರಿದಂತೆ ರಾಜ್ಯದ ಅನೇಕ ನೀರಾವರಿ ಯೋಜನೆಗಳಿಗೆ ಮರುಜೀವ ನೀಡಿದವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು. ಮೇ 7ರಂದು ನೀವು ಮತ ಹಾಕುವುದು ಕೇಂದ್ರದಲ್ಲಿ ಸಚಿವರಾಗುವ ಬೊಮ್ಮಾಯಿ ಅವರಿಗೆ ಎಂಬುದನ್ನು ಮರೆಯದಿರಿ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಂತರ ನೀರಾವರಿ ಯೋಜನೆಗಳ ಬಗ್ಗೆ ಅತ್ಯಂತ ತಳಸ್ಪರ್ಶಿ ಅಧ್ಯಯನ ಹೊಂದಿರುವ ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರು ಹಾಗೂ ಸಿಎಂ ಆಗಿದ್ದಾಗ ರಾಜ್ಯದ ನೀರಾವರಿ ಯೋಜನೆಗಳ ಸಮಗ್ರ ಅಧ್ಯಯನ ನಡೆಸಿದ್ದಾರೆ. ನೀರಾವರಿ ಯೋಜನೆಗಳ ಜ್ಞಾನದಲ್ಲಿ ಅವರಿಗೆ ಸರಿಸಾಟಿ ಯಾರೂ ಇಲ್ಲ. ಸಿಎಂ ಆಗಿದ್ದಾಗ ಕೇಂದ್ರದ ಜತೆ ಸಮನ್ವಯ ಸಾಧಿಸಿ ರಾಜ್ಯದ ಪರ ಅನೇಕ ಕೆಲಸಗಳನ್ನು ಮಾಡಿದ್ದಾರೆ. ನೀರಾವರಿ ಬಗ್ಗೆ ಅತ್ಯಂತ ಜ್ಞಾನ ಹೊಂದಿರುವ ಬೊಮ್ಮಾಯಿ ಅವರು ಗೆದ್ದರೆ ಕೇಂದ್ರ ಸಚಿವರಾಗಿ ನಿಮ್ಮೆಲ್ಲರ ಸೇವೆ ಮಾಡುತ್ತಾರೆ ಎಂದು ಭರವಸೆ ನೀಡಿದರು.
ಅಭಿವೃದ್ಧಿಯನ್ನೇ ಗುರಿಯಾಗಿ ಇಟ್ಟುಕೊಂಡಿರುವ ಬೊಮ್ಮಾಯಿ ಅವರು ಈ ಕ್ಷೇತ್ರಕ್ಕೆ ನೀರಾವರಿ ಯೋಜನೆಗಳು, ಮೆಡಿಕಲ್ ಕಾಲೇಜ್, ಕೆಎಂಎಫ್ ಯೂನಿಟ್ ಕೊಟ್ಟಿದ್ದಾರೆ. ರಾಜ್ಯದಾದ್ಯಂತ ಜಲಜೀವನ ಮಿಷನ್ ಕೆಲಸ ವೇಗ ಪಡೆದುಕೊಳ್ಳುವಂತೆ ಮಾಡಿದ್ದಾರೆ. ಆಲಮಟ್ಟಿ ಜಲಾಶಯವನ್ನು ಎತ್ತರಕ್ಕೆ ಏರಿಸಬೇಕಾದರೆ ಬೊಮ್ಮಾಯಿ ಅವರೇ ಬರಬೇಕಿದೆ ಎಂದರು.
ಈಗಾಗಲೇ ಚುನಾವಣೆ ನಡೆದಿರುವ 14 ಕ್ಷೇತ್ರಗಳಲ್ಲಿ 14 ಸ್ಥಾನವನ್ನು ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಒಂದೆರೆಡು ಕಡೆ ಮಾತ್ರ ಪೈಪೋಟಿ ನಡೆಯಲಿದೆ. ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳು ದಿಗ್ವಿಜಯ ಸಾಧಿಸಲಿದ್ದು, ಬೊಮ್ಮಾಯಿ ಅವರು ಎಲ್ಲರಿಗಿಂತ ಹೆಚ್ಚಿನ ಲೀಡ್ ಪಡೆಯಲಿದ್ದಾರೆ ಎಂದರು.
ಸಂಸದ ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಈಗಾಗಲೇ ಎಸ್‌ಐಟಿ ರಚನೆಯಾಗಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದಿದ್ದಾರೆ. ನೇಹಾ ಹಿರೇಮಠ ಪ್ರಕರಣಕ್ಕೂ ಪ್ರಜ್ವಲ್ ಪ್ರಕರಣಕ್ಕೂ ತಳುಕು ಹಾಕಬೇಡಿ ಎಂದರು.
ಹಿಂದುಗಳು ಬಿಜೆಪಿ ಬ್ರದರ್ಸ್
ರಾಜ್ಯದ ಹಿಂದುಗಳಲ್ಲಿ ಆತಂಕ ಶುರುವಾಗಿದೆ. ಒಂದೇ ಕೋಮಿನವರು ಪದೇಪದೆ ಹಿಂದುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ನೇಹಾ ಹತ್ಯೆ ಕೇಸ್‌ನಲ್ಲೂ ‘ಇದು ವೈಯಕ್ತಿಕ ವಿಚಾರ’ ಎಂದು ಗೃಹಸಚಿವರು ಹಗುರವಾಗಿ ಹೇಳಿದರು. ಸಿದ್ದರಾಮಯ್ಯ ಯಾವಾಗಲೂ ಸಂವೇದನಾರಹಿತವಾಗಿ ವರ್ತಿಸುತ್ತಾರೆ. ಮೈಸೂರಲ್ಲಿ ರಾಜು ಮನೆ ಮೇಲೆ ದಾಳಿ ಆಗಿತ್ತು. ಆಗ ಬಾಡೂಟ, ಮದುವೆ ಎಲ್ಲ ಕಡೆ ಓಡಾಡಿದರು. ರಾಜು ಮನೆಗೆ ಬರಲಿಲ್ಲ. ಅದೇ ಮುಸಲ್ಮಾನ ಆಗಿದ್ದರೆ ಹೋಗುತ್ತಿದ್ದರು. ನಾವು ಯಾವಾಗಲೂ ಹಿಂದುಗಳ ಪರವಾಗಿ ಇದ್ದೇ ಇರುತ್ತೇವೆ. ಅವರು ಹೇಗೆ ಮುಸ್ಲಿಂರನ್ನು ಬ್ರದರ್ಸ್ ಎಂದರೋ ಹಾಗೆ ಹಿಂದುಗಳು ನಮ್ಮ ಬ್ರದರ್ಸ್ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.
ರಾಜ್ಯ ರಾಜಕಾರಣಕ್ಕೆ ಎಂಟ್ರಿ ?
ಹಿಂದು ಫೈರ್ ಬ್ರಾಂಡ್‌ಗಳಿಗೆ ಟಿಕೆಟ್ ನಿರಾಕರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಂಹ, ನಮ್ಮ ಪರವಾಗಿ ನರೇಂದ್ರ ಮೋದಿ ಅವರು ಕ್ಯಾಬಿನೆಟ್‌ನಲ್ಲಿ ಇದ್ದರೆ ಸಾಕು. ನನಗೆ ಸಂಘ ಮತ್ತು ಮೋದಿಜಿ ಟಿಕೆಟ್ ಕೊಟ್ಟಿತ್ತು. ಹತ್ತು ವರ್ಷ ಕೆಲಸ ಮಾಡಿದ ತೃಪ್ತಿ ಇದೆ. ನನಗೆ ರಾಜ್ಯದಲ್ಲಿ ಓಡಾಡಿ ಎಂದಿದ್ದಾರೆ. ರಾಜ್ಯದಲ್ಲೂ ಹಿಂದುಪರ ಕೆಲಸ ಮಾಡಬೇಕಿದೆ. ಬಹುಶಃ ರಾಜ್ಯ ರಾಜಕಾರಣದಲ್ಲಿ ಅವಕಾಶ ಕೊಡಬಹುದು. ಕಾದು ನೋಡೋಣ ಎಂದು ಸಿಂಹ ನುಡಿದರು.
ಶ್ರೀನಿವಾಸ ಪ್ರಸಾದ ನಿಧನಕ್ಕೆ ಸಂತಾಪ
ಸಂಸದ ಶ್ರೀನಿವಾಸ ಪ್ರಸಾದ ನನ್ನನ್ನು ಅವರ ಮಗನಂತೆ ನೋಡಿಕೊಂಡಿದ್ದರು. ದಲಿತ ಸಮಾಜದ ಧ್ವನಿಯಾಗಿದ್ದರು. ಸರಿ- ತಪ್ಪುಗಳನ್ನು ನೇರವಾಗಿ ಹೇಳುತ್ತಿದ್ದ ಸಜ್ಜನ ರಾಜಕಾರಣಿ ಅವರು. ಹಳೇ ಮೈಸೂರು ಭಾಗದ ಏಕಮಾತ್ರ ಹಿಂದುಳಿದ ವರ್ಗಗಳ ನಾಯಕ. ಹೃದಯ ವೈಶಾಲ್ಯತೆ ಹೊಂದಿದ್ದ ರಾಜಕಾರಣಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.