ಜಿಲ್ಲೆ

ಕೆ.ವಿ.ಅಮರನಾಥರನ್ನು ಎಂಎಲ್‌ಸಿ ಮಾಡಿ; ಜಿಲ್ಲಾ ಮಡಿವಾಳ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ ಮಡಿವಾಳರ ಒತ್ತಾಯ

ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಮಡಿವಾಳ ಸಮಾಜದ ಕೊಡುಗೆಯೂ ಇದೆ. ಹೀಗಾಗಿ, ಮಡಿವಾಳ ಸಮಾಜದ ಕೆ.ವಿ.ಅಮರನಾಥ ಅವರಿಗೆ ವಿಧಾನ ಪರಿಷತ್‌ನಲ್ಲಿ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾ ಮಡಿವಾಳ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ ಮಡಿವಾಳರ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ಸಮುದಾಯದವರು 18ರಿಂದ 20 ಲಕ್ಷ ಜನಸಂಖ್ಯೆ ಇದೆ. ಆದರೂ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಹಿಂದಿನಿಂದಲೂ ತುಳಿತಕ್ಕೊಳಗಾಗಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಎಲ್ಲ ವರ್ಗದ ಜನರ ಬಟ್ಟೆಗಳನ್ನು ಶುಚಿ ಮಾಡಿ ಆರೋಗ್ಯದಿಂದ ಇರಲು ನಮ್ಮ ಸಮಾಜ ಶ್ರಮಿಸುತ್ತಿದೆ. ಎಲ್ಲ ಚುನಾವಣೆಯಲ್ಲಿ ರಾಜ್ಯದಲ್ಲಿ ನಮ್ಮ ಸಮುದಾಯದವರು ಬಹುತೇಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಹೀಗಾಗಿ, ನಮ್ಮ ಸಮುದಾಯದವರಿಗೆ ವಿಧಾನ ಪರಿಷತ್‌ನಲ್ಲಿ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಯುವ ಕಾಂಗ್ರೆಸ್ ಘಟಕದಿಂದಲೂ ಕೆಲಸ ಮಾಡುತ್ತಾ ಬಂದಿರುವ ಕೆ.ವಿ.ಅಮರನಾಥ ನಮ್ಮ ಸಮಾಜದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಾಕಷ್ಟು ಸಹಾಯ ಮಾಡಿದ್ದಾರೆ. ಹೀಗಾಗಿ ಅವರಿಗೆ ವಿಧಾನ ಪರಿಷತ್‌ನಲ್ಲಿ ಅವಕಾಶ ಕಲ್ಪಿಸಿ, ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ದೇವರಾಜ ಮಡಿವಾಳರ, ಈರಣ್ಣ ಮಡಿವಾಳರ, ಈಶ್ವರಮ್ಮ ಮಡಿವಾಳರ, ಸುಭಾಷ ಮಡಿವಾಳರ, ನರಸಪ್ಪ ಮಡಿವಾಳರ, ನಾಗರಾಜ ಮಡಿವಾಳರ, ಹನುಮಂತಪ್ಪ ಮಡಿವಾಳರ, ಜಗದೀಶ ಮಡಿವಾಳರ ಇತರರಿದ್ದರು.