ಜಿಲ್ಲೆ

ರೈತರಿಗೆ ನೋವಾಗುವಂತೆ ಸಚಿವರು ಮಾತನಾಡಿಲ್ಲ; ಶಾಸಕರಾದ ಲಮಾಣಿ, ಶಿವಣ್ಣನವರ ಜಂಟಿ ಹೇಳಿಕೆ

ಹಾವೇರಿ: ರೈತರಿಗೆ ಅಪಮಾನ ಮಾಡುವ, ರೈತರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಹೇಳಿಕೆ ನೀಡಿಲ್ಲ. ಯಾರೂ ತಪ್ಪಾಗಿ ಭಾವಿಸಬಾರದು ಎಂದು ವಿಧಾನಸಭಾ ಉಪಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹಾಗೂ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ ಸೆ.5ರಂದು ಜಿಲ್ಲಾ ಉಸ್ತುವಾರಿ ಸಚಿವರು ಪತ್ರಿಕಾಗೋಷ್ಠಿಯಲ್ಲಿ ರೈತರ ಆತ್ಮಹತ್ಯೆ ಕುರಿತು ಮಾತನಾಡುವಾಗ ನೀಡಿದ ಹೇಳಿಕೆ ತಪ್ಪಾಗಿ ಬಿಂಬಿತವಾಗಿದೆ. ಪರಿಹಾರ ಹೆಚ್ಚು ಕೊಡುವುದರಿಂದ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಳವಾಗುತ್ತವೆ ಎಂಬರ್ಥದಲ್ಲಿ ಅರ್ಥೈಸಲಾಗಿದೆ. ಸಚಿವರು ರೈತರು ಅಪಮಾನ ಮಾಡುವ ಹೇಳಿಕೆ ನೀಡಿಲ್ಲ. ರೈತ ಸಂಘಟನೆಗಳು ಕೆಲವೆಡೆ ಪ್ರತಿಭಟನೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಮಗಾಗಲಿ, ಸಚಿವರಿಗಾಗಲಿ, ಸರ್ಕಾರಕ್ಕಾಗಿ ರೈತರ ಬಗ್ಗೆ ಅಪಾರವಾದ ಗೌರವವಿದೆ. ಸಚಿವರ ಹೇಳಿಕೆ ಬಗ್ಗೆ ತಪ್ಪಾಗಿ ಭಾವಿಸುವುದು ಬೇಡ ಎಂದು ಮನವಿ ಮಾಡಿದರು.
ಮಾನವೀಯ ದೃಷ್ಟಿಯಿಂದ ರೈತ ಆತ್ಮಹತ್ಯೆ ಪ್ರಕರಣಗಳನ್ನು ನೋಡಿ ಸಹಾಯ ಮಾಡಿ ಎಂದು ಈಗಾಗಲೇ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ನಾವೆಲ್ಲರೂ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಎಸ್.ಎಫ್.ಎನ್.ಗಾಜಿಗೌಡ್ರ, ಇತರರು ಇದ್ದರು.
ಶೀಘ್ರದಲ್ಲೇ ಬರ ಘೋಷಣೆ
ರಾಜ್ಯದಲ್ಲಿ 190 ತಾಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಬರಗಾಲ ಘೊಷಣೆ ಮಾಡಿದೆ. ಉಳಿದ ತಾಲೂಕುಗಳಲ್ಲಿ ಗ್ರೌಂಡ್ ರಿಯಾಲಿಟಿ ಸರ್ವೇಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಬರ ಜಿಲ್ಲೆ ಎಂದು ಘೋಷಣೆಯಾಗಲಿದೆ ಎಂದು ಶಾಸಕ ರುದ್ರಪ್ಪ ಲಮಾಣಿ ತಿಳಿಸಿದರು.
ಪಟಾಕಿ ಮಾರಾಟಕ್ಕೆ ಅವಕಾಶ
ಗಣೇಶ ಹಬ್ಬಕ್ಕೆ ಪಟಾಕಿ ಮಾರಾಟಕ್ಕೆ ಯಾವುದೇ ತೊಂದರೆಯಾಗದಂತೆ ಸಾರ್ವಜನಿಕ ಸುರಕ್ಷತೆ ಹಿತದೃಷ್ಟಿಯಿಂದ ಬಯಲು ಪ್ರದೇಶ ಹಾಗೂ ಕ್ರೀಡಾಂಗಣಗಳಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಲಮಾಣಿ ಹೇಳಿದರು.