ಹಾವೇರಿ: ಗ್ರಾಮ ಪಂಚಾಯತಿಗೊಂದು ಮಾದರಿ ಶಾಲೆ ಎಂಬಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ಕೊಡಿ. ಆಯಾ ಗ್ರಾಪಂ ಅಧ್ಯಕ್ಷರು, ಪಿಡಿಒಗಳ ಜತೆಗೆ ಚರ್ಚಿಸಿ ಲಭ್ಯವಿರುವ ಜಾಗ ಗುರುತಿಸಿ ಶಾಲಾ ಕಾಂಪೌಂಡ್, ಸುಸಜ್ಜಿತ ಭೋಜನಾಲಯ, ಶೌಚಗೃಹ ಕಡ್ಡಾಯವಾಗಿ ನಿರ್ಮಾಣ ಮಾಡಿಸಿ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ ಶಿಕ್ಷಣ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತ್ರೈಮಾಸಿಕ ಕೆಡಿಪಿ ಹಾಗೂ ಪಿಡಿಒಗಳ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಶಾಲಾ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿದ ಬಿಇಒ ಎಂ.ಎಚ್ ಪಾಟೀಲ, ತಾಲೂಕಿನಲ್ಲಿ 63 ಶಾಲಾ ಕೊಠಡಿಗಳು ದುರಸ್ತಿಗೆ ಬಾಕಿ ಇವೆ. ಇವುಗಳ ದುರಸ್ಥಿಗಾಗಿ ಸುಮಾರು 1.27 ಕೋಟಿ ಅನುದಾನ ಬೇಕು. ಅಲ್ಲದೇ 43 ಕೊಠಡಿಗಳನ್ನು ಸಂಪೂರ್ಣವಾಗಿ ನೆಲಸಮಗೊಳಿಸಬೇಕಾಗಿದೆ. 16 ಹೊಸ ಕೊಠಡಿಗಳು ಹೆಚ್ಚುವರಿಯಾಗಿ ಬೇಕಿದೆ ಎಂದು ಮಾಹಿತಿ ನೀಡಿದರು.
ಒಂದು ಕೊಠಡಿ ನಿರ್ಮಿಸಲು 14.50 ಲಕ್ಷ ರೂ. ಬೇಕಾಗುತ್ತದೆ ಎಂದು ಪಂಚಾಯತ್‌ರಾಜ್ ಇಂಜಿನೀಯರ್ ಅಧಿಕಾರಿಗಳು ಮಾಹಿತಿ ನೀಡಿದರು. ಈ ವೇಳೆ ಕೆಸಿಸಿ ಬ್ಯಾಂಕ್ ನಿರ್ದೇಶಕ ಕೋಟ್ರೇಶಪ್ಪ ಬಸೇಗಣ್ಣಿ ಮಾತನಾಡಿ, ಅನುದಾನ ಕಡಿಮೆ ಇದ್ದು, ಖರ್ಚು ಹೆಚ್ಚಾಗುತ್ತದೆ. ಮಳೆಯಿಂದ ಸೋರುವ ಕಟ್ಟಡಗಳಿಗೆ ತಗಡಿನ ಶೀಟ್ ಹಾಕಬಹುದು ಎಂದು ಸಲಹೆ ನೀಡಿದರು. ಕಟ್ಟಡಗಳ ದುರಸ್ತಿ ಬಗ್ಗೆ ಇಂಜನಿಯರ್ ಜತೆಗೆ ಸಭೆ ನಡೆಸಿ ವರದಿ ಸಲ್ಲಿಸುವಂತೆ ಶಾಸಕರು ಸೂಚಿಸಿದರು.
ಪಂಚಾಯತ್‌ರಾಜ್ ಇಂಜನಿಯರಿಂಗ್ ವಿಭಾಗದ ಪ್ರಗತಿ ಪರಿಶೀಲಿಸಿದ ಶಾಸಕರು, 2022-23ನೇ ಸಾಲಿನ ವಿವೇಕ ಯೋಜನೆಯಡಿ ಸರ್ಕಾರಿ ಪದವಿಪೂರ್ವ ಕಾಲೇಜ್ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರಜಾ ದಿನಗಳಲ್ಲಿ ಕಾಮಗಾರಿ ಪೂರ್ಣ ಮಾಡುವುದು ಬಿಟ್ಟು, ಇಷ್ಟು ದಿನ ಏನು ಮಾಡಿದ್ದೀರಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಒಂದು ತಿಂಗಳು ಒಳಗಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಸ್ಥಳೀಯ ಜನಪ್ರತಿನಿಧಿಗಳನ್ನು ಕರೆದುಕೊಂಡು ಕಾಮಗಾರಿಗಳಿಗೆ ಚಾಲನೆ ನೀಡಿ ಎಂದರು.
ತಾಲೂಕಿನ ಜಂಗಮನಕೊಪ್ಪ ಕ್ರಾಸ್‌ನಿಂದ ಕರ್ಜಗಿ ಕಡೆಗೆ ರಸ್ತೆ ಮರು ಡಾಂಬರೀಕರಣ ಮಾಡಲಾಗುತ್ತದೆ. ಕರ್ಜಗಿ ಸಮೀಪದಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು, ಪಾಥ್ ಹೋಲ್ ಮುಚ್ಚಿಸಲಾಗುತ್ತಿದೆ. ನೆಲೋಗಲ್ ಪ್ರವಾಸಿ ಮಂದಿರ ನಿರ್ಮಾಣ ಬಗ್ಗೆ ಈಗಾಗಲೇ ಟೆಂಡರ್ ಆಗಿದ್ದು, ಏಜೆನ್ಸಿಗೆ ಇನ್ನು ಹಸ್ತಾಂತರ ಆಗಿಲ್ಲ ಎಂದು ಪಿಡಬ್ಲ್ಯೂಡಿ ಅಧಿಕಾರಿ ಮಾಹಿತಿ ನೀಡಿದರು. ವಿವಿಧ ಮಾರ್ಗಗಳ ದುರಸ್ತಿಗಾಗಿ 25 ಕೋಟಿ ಮೌಲ್ಯದ ಅಂದಾಜು ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಎಂ.ಎಂ ಮೈದೂರ, ತಾಪಂ ಆಡಳಿತಾಧಿಕಾರಿ ಸುರೇಶ ಹುಗ್ಗಿ, ತಾಪಂ ಇಒ ಪರಮೇಶ್ವರಪ್ಪ ಹುಬ್ಬಳ್ಳಿ, ಇತರರಿದ್ದರು.
ಶಾಲಾ ಮಕ್ಕಳಿಗೆ ಮಂಗಗಳ ಕಾಟ
ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಮಂಗಗಳ ಕಾಟ ಹೆಚ್ಚಾಗಿದ್ದು, ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಶಾಲಾ ಮಕ್ಕಳ ಮೇಲೆ ಎರಗಲು ಯತ್ನಿಸುತ್ತಿವೆ. ಅರಣ್ಯ ಇಲಾಖೆಯವರು ಮಂಗಗಳನ್ನು ಸೆರೆ ಹಿಡಿದು ಸ್ಥಳಾಂತರಿಸುವಂತೆ ಬಿಇಒ ಎಂ.ಎಚ್ ಪಾಟೀಲ ಕೋರಿದರು.
ಗೈರಾದವರ ಪಟ್ಟಿ ಮಾಡಿ
ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಸಮಸ್ಯೆಗಳು ಹೆಚ್ಚಾಗಿವೆ. ಕೆಡಿಪಿ ಸಭೆಗೆ ಗೈರಾದ ಪಿಡಿಒಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಪಟ್ಟಿ ಮಾಡಿ, ಕ್ರಮ ಕೈಗೊಳ್ಳಿ ಎಂದು ನಾಮನಿರ್ದೇಶಿತ ಸದಸ್ಯರು ಒತ್ತಾಯಿಸಿದರು. ಪಟ್ಟಿ ಮಾಡುವಂತೆ ಶಾಸಕರು ಸೂಚಿಸಿದರು.
ನೂತನ ಪದಾಕಾರಿಗಳಿಗೆ ಸನ್ಮಾನ
ಸಭೆಯಲ್ಲಿ ತಾಪಂ ಕೆಡಿಪಿಗೆ ನಾಮನಿರ್ದೇಶನಗೊಂಡ ಹೊಸರಿತ್ತಿಯ ಶಂಕ್ರಪ್ಪ ಅಂಬಿಗೇರ, ಕಬ್ಬೂರಿನ ಮಹಾದೇವಪ್ಪ ಹೊಸಳ್ಳಿ, ಕಳ್ಳಿಹಾಳದ ಮಲ್ಲಿಕಾರ್ಜುಣ ಬೂದಗಟ್ಟಿ, ಚಿಕ್ಕಲಿಂಗದಹಳ್ಳಿಯ ಪರಮೇಶ್ವರ ಮಣ್ಣಮ್ಮನವರ, ಬೆಳವಿಗಿಯ ಹುಸೇನಸಾಬ ಹುಬ್ಬಳ್ಳಿ, ಬಸಾಪೂರದ ಸುಮಂಗಲಾ ಇಪ್ಪಿಕೊಪ್ಪ ಅವರನ್ನು ಸ್ವಾಗತಿಸಿ ಸನ್ಮಾನಿಸಲಾಯಿತು.