ಹಾವೇರಿ: ಬೆಂಗಳೂರಿನಲ್ಲಿ ಏ.11ರಂದು ಕೆಎಂಎಫ್ ಅಧ್ಯಕ್ಷರೊಂದಿಗೆ ಹಾವೇರಿ ಹಾಲು ಒಕ್ಕೂಟದ ಸಭೆ ಆಯೋಜಿಸಲಾಗಿದೆ. ಹಾವೇರಿ ಹಾಲು ಒಕ್ಕೂಟದಲ್ಲಿ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿದೆ. ಈ ಹಾಲನ್ನು ಮುಂಬೈ, ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ಕೊಡುವಂತೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ಹಾಲು ಒಕ್ಕೂಟವೂ ಉಳಿಯಬೇಕು. ರೈತರೂ ಉಳಿಯಬೇಕು. ಈ ನಿಟ್ಟಿನಲ್ಲಿ ಒಕ್ಕೂಟ ಈಗಾಗಲೇ 2.50 ರೂ. ಏರಿಕೆ ಮಾಡಿದೆ. ನಷ್ಟ ಕಡಿಮೆ ಮಾಡಲು ಎಲ್ಲ ರೀತಿಯ ಪ್ರಯತ್ನಗಳು ನಡೆದಿವೆ. ಎಲ್ಲರೂ ಕೈಜೋಡಿಸಬೇಕು ಎಂದರು.
ಹಾನಗಲ್ಲ ಸಿಡಿಪಿಒ 8 ಸಾವಿರ ಕೆಜಿ ಹಾಲಿನ ಪೌಡರ್ ಅವ್ಯವಹಾರ ಮಾಡಿರುವ ಆರೋಪದ ಕುರಿತು ತನಿಖೆ ಮಾಡಿಸಿ, ಶಿಕ್ಷೆ ಕೊಡಿಸುತ್ತೇನೆ. ಕೋಳೂರ ಕೈಗಾರಿಕಾ ಕಾರಿಡಾರ್‌ನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ನಡೆಯುತ್ತಿದೆ. ಈ ಕುರಿತು ವರದಿ ತರಿಸುತ್ತೇನೆ ಎಂದರು.
ಅಕ್ಕಿ ಸಾಗಣೆ ಕುರಿತು ಕೆಡಿಪಿಯಲ್ಲಿ ಚರ್ಚೆ
ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರಶ್ನಿಸಿದ ಮಾಧ್ಯಮದ ಮೇಲೆ ಹಲ್ಲೆ ನಡೆಸುತ್ತಾರೆ. ಈವರೆಗೂ ಬಂಧನವಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಸಮಗ್ರವಾದ ವರದಿ ತರಿಸಿಕೊಂಡು ಕೆಡಿಪಿ ಸಭೆಯಲ್ಲಿ ಚರ್ಚಿಸುತ್ತೇನೆ ಎಂದು ಸಚಿವರು ತಿಳಿಸಿದರು.
ಬಿಜೆಪಿ ಯಾತ್ರೆ ಮಾಡಲಿ ಬಿಡಿ
ಬಿಜೆಪಿಯವರು ಯಾವುದೇ ಯಾತ್ರೆ ಮಾಡಲಿ. ಅದರಲ್ಲಿ ಹುರುಳು ಇದ್ದರೆ ಮಾಡಲಿ. ಕೇಂದ್ರ ಸರ್ಕಾರದಲ್ಲಿ ಬೆಲೆ ಏರಿಕೆ ಆಗಿತ್ತು, ನಾವೂ ಮಾಡಿದ್ದೇವೆ. ಅವರೂ ಮಾಡಲಿ. ಜಾಹೀರಾತು ಕೊಟ್ಟರೆ ಜನ ನಂಬುತ್ತಾರಾ ? ರಾಜಕೀಯ ಪಕ್ಷಗಳಿಗೆ ಕೆಲಸ ಇಲ್ಲದಿದ್ದಾಗ ಏನಾದರೂ ಮಾಡಲೇಬೇಕಲ್ಲ. ನಾವೂ ಮಾಡಿದ್ದೇವೆ. ಅವರೂ ಮಾಡುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.