ಜಿಲ್ಲೆ

ಯಾರೂ ತಪ್ಪು ಗ್ರಹಿಸಿಕೊಳ್ಳುವುದು ಬೇಡ; ಸಚಿವ ಶಿವಾನಂದ ಪಾಟೀಲ ಸ್ಪಷ್ಟನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಹೆಚ್ಚಿನ ಪರಿಹಾರ ಸಿಗುತ್ತದೆ ಎಂಬ ಕಾರಣಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ನಾನು ಹೇಳಿಲ್ಲ. ಈ ಬಗ್ಗೆ ಯಾರೂ ತಪ್ಪು ಗ್ರಹಿಕೆ ಮಾಡಿಕೊಳ್ಳುವುದು ಬೇಡ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ರೈತ ಆತ್ಮಹತ್ಯೆ ಕುರಿತು ಸಚಿವರ ಹೇಳಿಕೆ ವಿಚಾರ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ರೈತ ಸಂಘಟನೆಗಳಿಂದ ಪ್ರತಿರೋಧ ವ್ಯಕ್ತವಾಯಿತು. ಕೂಡಲೇ ಎಚ್ಚೆತ್ತ ಸಚಿವ ಪಾಟೀಲ, ಪ್ರವಾಸಿ ಮಂದಿರದಲ್ಲಿ ಮತ್ತೊಮ್ಮೆ ತುರ್ತು ಪತ್ರಿಕಾಗೋಷ್ಠಿ ಕರೆದು ಸ್ಪಷ್ಟೀಕರಣ ಕೊಟ್ಟರು.
ನಾನು ಹಾವೇರಿ ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಹೆಚ್ಚು ಕೆಲಸ ಮಾಡಬೇಕು ಎಂಬ ಉದ್ದೇಶ ಇಟ್ಟುಕೊಂಡವನು. ಈ ಜಿಲ್ಲೆಯಲ್ಲಿ ಬಾಕಿ ಉಳಿದುಕೊಂಡಿರುವ ಎಲ್ಲ ನೀರಾವರಿ ಯೋಜನೆಗಳು 2024-25ನೇ ಸಾಲಿನಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ನಿಜವಾದ ಮಾಹಿತಿಯನ್ನು ಜನತೆಗೆ ನೀಡಬೇಕು. ಆತ್ಮಹತ್ಯೆ ಪ್ರಕರಣಗಳಲ್ಲಿ ತಪ್ಪು ಸಂದೇಶ ಹೋಗಬಾರದು. ತಪ್ಪು ಮಾಹಿತಿಯಿಂದ ರೈತರು ಆತಂಕಕ್ಕೆ ಒಳಗಾಗುತ್ತಾರೆ. ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಪ್ರಕರಣಗಳ ಮಾಹಿತಿಯನ್ನು ಜನರಿಗೆ ತಲುಪಿಸುವ ವರದಿಯಲ್ಲಿ ಪ್ರಕರಣದ ಸತ್ಯಾಸತ್ಯೆಯು ಎಫ್‌ಎಸ್‌ಎಲ್ ವರದಿ ಬಂದ ಮೇಲೆ ಸಾವಿನ ನಿಖರತೆ ಗೊತ್ತಾಗಲಿದೆ ಎಂದು ಉಲ್ಲೇಖಿಸುವಂತೆ ಸುದ್ದಿಗಾರರಲ್ಲಿ ಮನವಿ ಮಾಡಿಕೊಂಡರು.
ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಎಲ್ಲ ಪ್ರಕರಣಗಳು ರೈತರ ಆತ್ಮಹತ್ಯೆಯಾವುದಿಲ್ಲ. ಉಪವಿಭಾಗಾಧಿಕಾರಿಗಳ ನೇತೃತ್ವದ ಸಮಿತಿ ಆತ್ಮಹತ್ಯೆಗೆ ಕಾರಣಗಳನ್ನು ನಿರ್ಧರಿಸುತ್ತದೆ. ಎಫ್‌ಎಸ್‌ಎಲ್ ವರದಿ ನಂತರ ನಿಖರ ಕಾರಣಗಳು ತಿಳಿಯುತ್ತದೆ. ಸಾಲದ ಒತ್ತಡ ಹಾಗೂ ಸಾಲಕ್ಕಾಗಿ ಬ್ಯಾಂಕ್‌ಗಳ ಒತ್ತಡಕ್ಕೆ ಒಳಗಾಗಿ ರೈತರು ಆತ್ಮಹತ್ಯೆ ಮಾಡಿಕೊಂಡರೆ ಇಂತಹ ಪ್ರಕರಣಗಳು ರೈತ ಆತ್ಮಹತ್ಯೆಯಾಗುತ್ತವೆ. ಕೆಲವೊಮ್ಮೆ ದಾಖಲಾದ ಪ್ರಕರಣಗಳಲ್ಲಿ ವೈಯಕ್ತಿಕ ಹಾಗೂ ಇತರ ಸಮಸ್ಯೆಗಳಿಗಾಗಿ ಮಾಡಿಕೊಳ್ಳುವ ಆತ್ಮಹತ್ಯೆಗಳನ್ನು ರೈತ ಆತ್ಮಹತ್ಯೆ ಎಂದು ಎಫ್‌ಐಆರ್ ದಾಖಲಾಗುತ್ತವೆ. ಆದರೆ, ಉಪವಿಭಾಗಾಧಿಕಾರಿಗಳ ನೇತೃತ್ವದ ಸಮಿತಿಯ ತೀರ್ಮಾನವೇ ಅಂತಿಮ ಎಂದು ತಿಳಿಸಿದರು.
ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ ಇತರರಿದ್ದರು.