ಜಿಲ್ಲೆ

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪರಮೇಶ ಸೇರ್ಪಡೆ; ಅಕ್ಕಿ ಕಾಳಿನ ಸೂಕ್ಷ್ಮ ಕಲೆಗೆ ಒಲಿದ ದಾಖಲೆ

ಹಾವೇರಿ: ಮೈಕ್ರೋ ಕಲಾವಿದ ತಾಲೂಕಿನ ಗುಡಿಸಲಕೊಪ್ಪ ಗ್ರಾಮದ ಪರಮೇಶ ಶಂಕ್ರಪ್ಪ ಬಂಡಿ ಅವರು ಅಕ್ಕಿ ಕಾಳಿನಲ್ಲಿ ನಾಡಗೀತೆ ಬರೆದು ‘ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾ’ ಮತ್ತು ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸೇರ್ಪಡೆಯಾಗಿದ್ದಾರೆ ಎಂದು ರಾಣೆಬೆನ್ನೂರಿನ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಯುಸಿ ಅಧ್ಯಯನ ಮಾಡಿರುವ ಪರಮೇಶ ಜೀವನೋಪಾಯಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಡ್ರೈಫ್ರೂಟ್ ಅಂಗಡಿ ನಡೆಸುತ್ತಿದ್ದಾರೆ. ಸೂಕ್ಷ್ಮಕಲೆಯನ್ನು ಕರಗತ ಮಾಡಿಕೊಂಡು 80 ನಿಮಿಷದಲ್ಲಿ 144 ಅಕ್ಕಿಕಾಳಿನಲ್ಲಿ ನಾಡಗೀತೆ ಬರೆದು ದಾಖಲೆ ನಿರ್ಮಿಸಿದ್ದಾರೆ ಎಂದರು.
ಕಲಾವಿದ ಪರಮೇಶ ಬಂಡಿ ಮಾತನಾಡಿ, ಹತ್ತು ವರ್ಷಗಳಿಂದ ಸೂಕ್ಷ್ಮ ಕಲೆ ಮಾಡುತ್ತಿದ್ದೇನೆ. 92 ಅಕ್ಕಿ ಕಾಳು ಬಳಸಿ ವಂದೇ ಮಾತರಂ ಗೀತೆ ರಚಿಸಿದ್ದೇನೆ. 111 ಅಕ್ಕಿಕಾಳಿನಲ್ಲಿ ಬರೆದಿರುವ ಸುಬ್ರಹ್ಮಣ್ಯ ಶ್ಲೋಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿದೆ. ಇತ್ತೀಚೆಗೆ 144 ಅಕ್ಕಿ ಕಾಳು ಬಳಸಿ 80 ನಿಮಿಷದಲ್ಲಿ ನಾಡಗೀತೆ ರಚಿಸಿದ್ದು ದಾಖಲೆಯಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೀತೆಯನ್ನು 3 ಭಾಷೆಯಲ್ಲಿ ಬರೆಯಲಾಗಿದ್ದು, ಅದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಉಡುಗೊರೆ ನೀಡಲಿದ್ದೇನೆ. ಎಂದರು.
ಸುದ್ದಿಗೋಷ್ಠಿಯಲ್ಲಿ ಕಲಾವಿದ ಗಣೇಶ ರಾಯ್ಕರ, ಅಜಯ ಮಠದ, ಕರಿಯಪ್ಪ ಅಣ್ಣೇರ, ಇತರರಿದ್ದರು.

ನೆರವಿನ ನಿರೀಕ್ಷೆ
ಜಿಲ್ಲೆಯ ಯುವ ಪ್ರತಿಭೆ ಪರಮೇಶ ಅವರ ವಿಶಿಷ್ಟ ಕಲೆ ಗಿನ್ನಿಸ್ ದಾಖಲೆಯಲ್ಲಿ ಮೂಡಬೇಕಿದೆ. ಅದಕ್ಕಾಗಿ ಅವರಿಗೆ ಆರ್ಥಿಕ ನೆರವು ಬೇಕಾಗಿದೆ. ಸಂಕಷ್ಟದಲ್ಲಿರುವ ಪರಮೇಶ ಅವರಿಗೆ ನೆರವು ನೀಡಲಿಚ್ಛಿಸುವವರು ನೇರವಾಗಿ ಅವರನ್ನು (8660973962) ಸಂಪರ್ಕಿಸಬಹುದು ಎಂದು ಪ್ರಕಾಶ ಬುರಡಿಕಟ್ಟಿ ಮನವಿ ಮಾಡಿದರು.