ಜಿಲ್ಲೆ

‘ಎ’ ಬ್ಲಾಕ್ ಕಾಮಗಾರಿ ಮೊದಲು ಪೂರ್ಣಗೊಳಿಸಿ; ತಿಂಗಳಾಂತ್ಯದೊಳಗೆ ತರಗತಿಗೆ ಅಗತ್ಯ ಕೊಠಡಿ ಹಸ್ತಾಂತರಿಸಿ; ಸಚಿವ ಶಿವಾನಂದ ಪಾಟೀಲ ಸೂಚನೆ

ಹಾವೇರಿ: ನೂತನ ಮೆಡಿಕಲ್ ಕಾಲೇಜು ಕಟ್ಟಡದಲ್ಲೇ ಎಂಬಿಬಿಎಸ್ ಎರಡನೇ ಬ್ಯಾಚಿನ ಹೊಸ ವಿದ್ಯಾರ್ಥಿಗಳಿಗೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಬೇಕು. ತರಗತಿ ಕೊಠಡಿ, ಪ್ರಯೋಗಾಲಯ ಸೇರಿದಂತೆ ‘ಎ’ ಬ್ಲಾಕ್ ಕಾಮಗಾರಿಯನ್ನು ಆಗಸ್ಟ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಜಿಲ್ಲಾ ಉಸ್ತುವಾರಿ ಶಿವಾನಂದ ಪಾಟೀಲ ಖಡಕ್ ಸೂಚನೆ ನೀಡಿದರು.
ಇಲ್ಲಿನ ದೇವಗಿರಿ ಯಲ್ಲಾಪುರ ಸಮೀಪದ ಹಾವೇರಿ ಮೆಡಿಕಲ್ ಕಾಲೇಜು (ಹಿಮ್ಸ್) ಕಟ್ಟಡದ ಕಾಮಗಾರಿಯನ್ನು ಸಚಿವರು ಪರಿಶೀಲಿಸಿದರು. ಆಗಸ್ಟ್ 15ರೊಳಗಾಗಿ ಎ ಬ್ಲಾಕ್ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದರೂ ಏಕೆ ಮುಗಿಸಿಲ್ಲ. ಎ ಬ್ಲಾಕ್ ಪೂರ್ಣಗೊಳಿಸದೇ ಬಿ ಬ್ಲಾಕ್ ಮತ್ತು ಸಿಬ್ಲಾಕ್ ಕಾಮಗಾರಿಯನ್ನು ಕೈಗೊಂಡಿದ್ದೀರಿ ?, ಬೋಧಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶೌಚಗೃಹಗಳನ್ನು ಈವರೆಗೆ ಏಕೆ ಏಕೆ ನಿರ್ಮಿಸಿಲ್ಲ ? ಕಾಮಗಾರಿ ಏಕೆ ವಿಳಂಬವಾಯಿತು ? ಎಂದು ಆರೋಗ್ಯ ಇಲಾಖೆ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಗರಂ ಆದರು.
ಮೆಡಿಕಲ್ ಕಾಲೇಜಿನ ತರಗತಿಗಳು ದೇವಗಿರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿವೆ. ಅಲ್ಲಿರುವ ವಿದ್ಯಾರ್ಥಿಗಳನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪ್ರಯೋಗಾಲಯ, ವಸತಿ ನಿಲಯ, ಸಿಬ್ಬಂದಿ ವಸತಿ ಗೃಹ, ಆಡಳಿತ ಕಚೇರಿ ಕಾಮಗಾರಿಗಳನ್ನು ಯಾವಾಗಿ ಮುಗಿಸುತ್ತೀರಿ ಎಂದು ಪ್ರಶ್ನಿಸಿದರು. ಮೆಡಿಕಲ್ ಕಾಲೇಜು ಆರಂಭವಾದರೆ ಜಿಲ್ಲೆಗೆ ಒಳ್ಳೆಯ ಹೆಸರು ಬರುತ್ತದೆ ಎಂದರು.
ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ ಬಣಕಾರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್‌ಪಿ ಡಾ.ಶಿವಕುಮಾರ ಗುಣಾರೆ, ಹಿಮ್ಸ್ ಡೀನ್ ಡಾ.ಉದಯ ಮುಳಗುಂದ, ಡಿಎಚ್‌ಒ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ ಹಿರೇಮಠ, ಸಂಜೀವ ನೀರಲಗಿ, ಇತರರಿದ್ದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಸಸ್ಪೆಂಡ್ ಆಗಬೇಕಿತ್ತು : ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಳೆ ಸೋರಿಕೆಯಿಂದ ರೋಗಿಗಳಿಗೆ ತೀವ್ರ ತೊಂದರೆಯಾದ ಪ್ರಕರಣದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್.ಹಾವನೂರ ಸಸ್ಪೆಂಡ್ ಆಗಬೇಕಿತ್ತು. ಕಾಮಗಾರಿ ನಡೆಯುವ ವೇಳೆ ಮಕ್ಕಳು, ತಾಯಂದಿರು ಮತ್ತು ರೋಗಿಗಳನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರ ಮಾಡುವ ಹೊಣೆಗಾರಿಕೆ ಇವರದ್ದೇ ಆಗಿತ್ತು ಎಂದು ಸಚಿವರು ಹೇಳಿದರು.

ಎಸ್‌ಐಟಿ ತನಿಖೆ ನಡೆಯುತ್ತಿದೆ
ರಾಜ್ಯದಲ್ಲಿ ಹಾವೇರಿ ಸೇರಿದಂತೆ ನಾಲ್ಕು ಮೆಡಿಕಲ್ ಕಾಲೇಜುಗಳ ನಿರ್ಮಾಣದಲ್ಲಿ ಅಂದಾಜು ವೆಚ್ಚಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡಿ ಅವ್ಯವಹಾರ ನಡೆಸಿರುವ ಬಗ್ಗೆ ಮುಖ್ಯಮಂತ್ರಿಯವರು ಎಸ್‌ಐಟಿ ತನಿಖೆಗೆ ಆದೇಶಿಸಿದ್ದಾರೆ. ತನಿಖೆ ಅದರ ಪಾಡಿಗೆ ನಡೆಯುತ್ತದೆ. ಆದರೆ, ಮೆಡಿಕಲ್ ಕಾಲೇಜುಗಳ ಕಾಮಗಾರಿ ಕೆಲಸ ನಿಲ್ಲಬಾರದು. ಕಾಲೇಜು ಸಿಬ್ಬಂದಿಗೂ ಸಂಬಳ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
20 ಸ್ಥಾನ ಗೆಲ್ಲುತ್ತೇವೆ
ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ನ್ಯಾಯಾಲಯ ನೀಡಿದ್ದ ತೀರ್ಪಿಗೆ ಸುಪ್ರಿಂಕೋರ್ಟ್ ತಡೆಯಾಜ್ಞೆ ನೀಡಿರುವುದು ಸ್ವಾಗತಾರ್ಹ. ನ್ಯಾಯಾಲಯಗಳು ತಪ್ಪು ಮಾಡುವುದಿಲ್ಲ ಎಂಬ ನಂಬಿಕೆಗೆ ಇದು ಸಾಕ್ಷಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20ರಿಂದ 22 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.