ಹಾವೇರಿ: ತಾಲೂಕಿನ ದೇವಗಿರಿಯ ಹಾವೇರಿ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯ (ಹಿಮ್ಸ್)ದ ರಚನಾ ಶಾಸ್ತ್ರ ವಿಭಾಗಕ್ಕೆ ಬೆಳಗಾವಿ ಜಿಲ್ಲೆ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್ ಹಾಗೂ ಎಸ್‌ಜಿವಿ ಆಯುರ್ವೇದ ಮಹಾವಿದ್ಯಾಲಯದ ವತಿಯಿಂದ ಎರಡು ಮೃತದೇಹಗಳನ್ನು ದಾನ ಮಾಡಲಾಗಿದೆ.
ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ 80 ವರ್ಷದ ಚಂದ್ರಶೇಖರ ಬಸಪ್ಪ ಬಾಡಗಿ ಹಾಗೂ ಬೆಳಗಾವಿ ಜಿಲ್ಲೆ ಬೈಲಹೊಂಗಲದ 79 ವರ್ಷದ ಶಾರದಾ ಗಂಗಯ್ಯ ಮಠ ಅವರ ಮೃತ ದೇಹಗಳನ್ನು ವೈದ್ಯ ವಿದ್ಯಾರ್ಥಿಗಳ ಶರೀರದ ಅಧ್ಯಯನ ಹಾಗೂ ಸಂಶೋಧನ ಶರೀರಚನ (ಅನಾಟಮಿ) ವಿಭಾಗಕ್ಕೆ ದಾನವಾಗಿ ನೀಡಲಾಗಿದೆ.
ವೈದ್ಯಕೀಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅಂಗ ರಚನಾ ವಿಭಾಗದ ಮುಖ್ಯಸ್ಥೆ ಡಾ.ಪೂರ್ಣಿಮಾ, ದೇಹದಾನ ಮಾಡಿದ ಕುಟುಂಬದ ಸದಸ್ಯರು, ಡಾ.ಮಹಾಂತೇಶ ರಾಮಣ್ಣವರ, ಐ.ಆರ್.ಮಠಪತಿ, ವೈದ್ಯಕೀಯ ಕಾಲೇಜ್‌ನ ಸಿಬ್ಬಂದಿ ಮೃತದೇಹಗಳಿಗೆ ಮಾಲಾರ್ಪಣೆ ಮಾಡಿ ಧನ್ವಂತರಿ ಪ್ರಾರ್ಥನೆಯೊಂದಿಗೆ ಪೂಜೆ ಸಲ್ಲಿಸಿ ನಂತರ ಅಂಗರಚನಾ ವಿಭಾಗಕ್ಕೆ ಹಸ್ತಾಂತರಲಾಯಿತು.
ಫಾರಿನ್ಸಿಕ್ ಮೆಡಿಸಿನ್ ಮುಖ್ಯಸ್ಥ ಡಾ.ಸುನೀಲ ಅರಮನೆ, ಔಷಧ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ನವೀನಕುಮಾರ ಎಂ., ಎಂಬಿಬಿಎಸ್ ವಿದ್ಯಾರ್ಥಿಗಳು, ಸಿಬ್ಬಂದಿ ಇತರರಿದ್ದರು.
ನೇತ್ರ, ಅಂಗಾಗ ದಾನದ ಉಪನ್ಯಾಸ
ದೇಹದಾನ ಜಾಗೃತಿಗಾಗಿ ತಂದೆಯ ಮೃತ ದೇಹ ಛೇದನ ಮಾಡಿ ವೈದ್ಯಕೀಯ ಇತಿಹಾಸ ಸೃಷ್ಟಿಸಿದ ಕೆಎಲ್ಇ ವಿಶ್ವವಿದ್ಯಾಲಯದ ಬೆಳಗಾವಿಯ ಬಿ.ಎಂ.ಕೆ. ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನ ವಿಭಾಗದ ಮುಖ್ಯಸ್ಥ, ಟ್ರಸ್ಟ್ ಕಾರ್ಯದರ್ಶಿ ಡಾ.ಮಹಾಂತೇಶ ರಾಮಣ್ಣವರ ನೇತ್ರ, ಚರ್ಮ, ಅಂಗಾಂಗ ಹಾಗೂ ದೇಹದಾನದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.