ಜಿಲ್ಲೆ

ಈವರೆಗೂ ಸ್ವಾತಿ ಮೊಬೈಲ್ ಪತ್ತೆ ಹಚ್ಚದ ಖಾಕಿ; ಹಲಗೇರಿ ಠಾಣೆ ಪೊಲೀಸರ ಮೇಲೆ ಹಲವು ಅನುಮಾನ; ಆರೋಪಿಗಳಿಗೆ ರಾಜಾತಿಥ್ಯ ನೀಡಿದರೂ ಕ್ರಮವಿಲ್ಲ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ನರ್ಸ್ ಸ್ವಾತಿ ಬ್ಯಾಡಗಿ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಗೊಂದಲದ ಗೂಡಾಗುತ್ತಿದ್ದು, ಆರೋಪಿಗಳನ್ನು ಪತ್ತೆ ಹಚ್ಚಿದರೂ ಸ್ವಾತಿ ಮೊಬೈಲ್ ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ತರಾತುರಿಯಲ್ಲಿ ಅಂತ್ಯಕ್ರಿಯೆ, ಆರೋಪಿಗಳಿಗೆ ಠಾಣೆಯಲ್ಲಿ ರಾಜಾತಿಥ್ಯ ಆರೋಪದಿಂದಾಗಿ ಹಲಗೇರಿ ಠಾಣೆ ಪೊಲೀಸರ ಮೇಲೆ ಹಲವು ಅನುಮಾನ ಮೂಡುತ್ತಿವೆ.

ಮಾ.3ರಂದು ಸ್ವಾತಿಯನ್ನು ಹತ್ಯೆಗೈದ ನಯಾಜ್ ಬೆಣ್ಣಿಗೇರಿ, ದುರ್ಗಾಚಾರಿ ಹಾಗೂ ವಿನಾಯಕ ಪೂಜಾರಿ ಆಕೆಯ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಕೂಸಗಟ್ಟಿ- ನಂದಿಗುಡಿ ನಡುವಿನ ತುಂಗಭದ್ರಾ ನದಿಯ ಸೇತುವೆ ಬಳಿ ಬಂದು ನದಿಯಲ್ಲಿ ಎಸೆದಿದ್ದರು. ನಂತರ ಸಾಕ್ಷಿ ನಾಶ ಮಾಡುವ ನಿಟ್ಟಿನಲ್ಲಿ ಆಕೆಯ ಮೊಬೈಲ್‌ಅನ್ನು ಅಲ್ಲಿಂದಲೇ ನದಿಯಲ್ಲಿ ಎಸೆದಿದ್ದರು. ಅದೇ ಸ್ಥಳದಲ್ಲಿ ಆರೋಪಿತರನ್ನು ಕರೆದುಕೊಂಡು ಹೋಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಎಷ್ಟು ಹುಡುಕಾಡಿದರೂ ಮೊಬೈಲ್ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.

ಇದಲ್ಲದೇ ಸ್ವಾತಿ ಅಂತ್ಯಕ್ರಿಯೆ ಬಗ್ಗೆ ಪೊಲೀಸರ ಹೇಳಿಕೆ, ನಡೆ ಗೊಂದಲಮಯವಾಗಿದೆ. ಮಾ.6ರಂದು ಸ್ವಾತಿ ಮೃತದೇಹ ಸಿಕ್ಕಿತ್ತು. ಮಾ.7ರಂದು ಅಂತ್ಯಕ್ರಿಯೆ ನೆರವೇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದರು. ಆದರೆ, ಕುಟುಂಬದವರ ಎದುರು ಮಾ.11ರಂದು ಅಂತ್ಯಕ್ರಿಯೆ ಮಾಡಿರುವುದಾಗಿ ಹೇಳಿದ್ದಾರೆ. ಹಾಗಾದರೆ, ಮಾ.7ರಂದು ಕುಟುಂಬದವರು ನಾಪತ್ತೆ ಪ್ರಕರಣ ದಾಖಲಿಸಿದ್ದರೂ ಯಾಕೆ ಗಮನಿಸಲಿಲ್ಲ ಎಂಬ ಸಂಶಯ ಪೊಲೀಸರ ಮೇಲೆ ಮೂಡಿದೆ.

ಸ್ವಾತಿಯ ಮೃತದೇಹ ಪತ್ತೇಪುರ ಬಳಿ ನದಿಯಲ್ಲಿ ಮಾ.6ರಂದು ಪತ್ತೆಯಾದಾಗ ಮೇಲ್ನೋಟಕ್ಕೆ ಕೊಲೆ ಎಂದು ಗೊತ್ತಾದರೂ ಯಾಕೆ ಗಂಭೀರವಾಗಿ ಪರಿಗಣಿಸಲಿಲ್ಲ ? ಮರುದಿನವೇ ನಾಪತ್ತೆ ಪ್ರಕರಣ ದಾಖಲಾಗಿದ್ದರೂ ಆರೋಪಿಗಳ ಪತ್ತೆ ಮಾಡುವಲ್ಲಿ ವಿಳಂಬ ಮಾಡಿದ್ದು ಏಕೆ ? ಠಾಣೆಯಲ್ಲಿ ಆರೋಪಿಗಳಿಗೆ ಮೊಬೈಲ್, ಗುಟಕಾ ಕೊಟ್ಟಿದ್ದು ಯಾಕೆ ? ಆರೋಪಿಗಳ ಹಿಂದೆ ಯಾರಾದರೂ ಪ್ರಭಾವಿಗಳ ಕೈವಾಡ ಇದೆಯಾ ? ರಾಜಕಾರಣಿಗಳು ಒತ್ತಡ ಹೇರುತ್ತಿದ್ದಾರಾ ? ಸರ್ಕಾರ ಕೂಡ ಒಂದು ಸಮುದಾಯದವರ ಓಲೈಕೆಗಾಗಿ ಪೊಲೀಸರ ಮೇಲೆ ಒತ್ತಡ ಹೇರುತ್ತಿದೆಯಾ ? ಎಂಬ ಹಲವು ಪ್ರಶ್ನೆಗಳು ಜನರಲ್ಲಿ ಕಾಡುತ್ತಿವೆ.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಈ ಕುರಿತು ತನಿಖೆ ನಡೆಸುವಂತೆ ಎಸ್‌ಪಿ ಅವರಿಗೆ ಈಗಾಗಲೇ ಸೂಚಿಸಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಬೇಕು, ಸೂಕ್ತ ರೀತಿಯ ತನಿಖೆ ನಡೆಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಸಿಬಿಐ ತನಿಖೆಗೆ ಒಪ್ಪಿಸಿ

ಸ್ವಾತಿ ಮರಣೋತ್ತರ ವರದಿ ಬಗ್ಗೆ ವಿಚಾರಿಸಲು ಮಾ.20ರಂದು ಹಲಗೇರಿ ಪೊಲೀಸ್ ಠಾಣೆಗೆ ಹೋದಾಗ ಮೂವರೂ ಆರೋಪಿಗಳನ್ನು ಒಂದೇ ಸೆಲ್‌ನಲ್ಲಿ ಹಾಕಲಾಗಿತ್ತು. ಆರೋಪಿ ನಯಾಜ್ ಪೊಲೀಸರಿಂದ ಮೊಬೈಲ್ ಪಡೆದು ಫೋನ್‌ನಲ್ಲಿ ಮಾತನಾಡುತ್ತಿದ್ದ. ದುರ್ಗಾಚಾರಿ ಗುಟಕಾ ತಿನ್ನುತ್ತಿದ್ದ. ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೋ, ಲಾಡ್ಜ್‌ನಲ್ಲಿ ಇದ್ದಾರೋ ಎಂಬುದೇ ಗೊತ್ತಾಗುತ್ತಿಲ್ಲ. ಪೊಲೀಸರ ಮೇಲೆ ಅನುಮಾನವಿದೆ. ಹಾಗಾಗಿ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಸ್ವಾತಿ ದೊಡಪ್ಪ ರಾಜಪ್ಪ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಕೋಟ್:

ನನ್ನ ಮಗಳಿಗೆ ಆದ ಅನ್ಯಾಯ ಯಾವ ಹೆಣ್ಣು ಮಕ್ಕಳಿಗೂ ಆಗಬಾರದು. ನಮಗೆ ನ್ಯಾಯ ಸಿಗಬೇಕು. ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಗೆ ಮೊಬೈಲ್, ಗುಟಕಾ ಕೊಟ್ಟಿರುವುದರಿಂದ ನಮಗೆ ಪೊಲೀಸರ ಮೇಲೆ ಅನುಮಾನ ಮೂಡುತ್ತಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಬೇಕು.

- ರೇಖಾ, ಸ್ವಾತಿ ಬ್ಯಾಡಗಿ ತಾಯಿ