ಜಿಲ್ಲೆ

ಭುವಿಗೆ ತಂಪೆರೆದ ಮಳೆರಾಯ; ಜಿಲ್ಲೆಯ ವಿವಿಧೆಡೆ ರಭಸದ ಮಳೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಮಳೆಗಾಗಿ ಎಲ್ಲೆಡೆ ಪ್ರಾರ್ಥನೆ, ಪೂಜೆಗಳು ನಡೆದಿದ್ದು, ಮಳೆ ಇಲ್ಲದೇ ಕಂಗೆಟ್ಟಿದ್ದ ರೈತರಿಗೆ ಹಾಗೂ ಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಯ ಜನತೆಗೆ ಕೊನೆಗೂ ಮಳೆರಾಯ ಕರುಣೆ ತೋರಿದ್ದಾನೆ. ಗುರುವಾರ ಜಿಲ್ಲಾ ಕೇಂದ್ರ ಹಾವೇರಿ ನಗರ ಸುತ್ತಮುತ್ತ ಸೇರಿದಂತೆ ಜಿಲ್ಲೆಯ ವಿವಿಧೆಡೆ ರಭಸವಾದ ಮಳೆ ಸುರಿದಿದೆ. ಇಡೀ ದಿನ ತಂಪಾದ ವಾತಾವರಣದಿಂದ ಆಹ್ಲಾದಕರ ವಾತಾವರಣ ಸೃಷ್ಟಿಯಾಗಿತ್ತು.
ಹಾವೇರಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಆರಂಭದಲ್ಲಿ ಜಿಟಿ ಜಿಟಿ ಮಳೆ ಕಣ್ಣಾ ಮುಚ್ಚಾಲೆ ಆಟ ಆಡಿತಾದರೂ ಮಧ್ಯಾಹ್ನದ ವೇಳೆ ಕೆಲ ಹೊತ್ತು ರಭಸವಾದ ಮಳೆ ಸುರಿಯಿತು. ಮಳೆಯಿಂದ ರೈತರು ಸೇರಿದಂತೆ ಸಾರ್ವಜನಿಕರು ತಂಪನೆಯ ಅನುಭವದಲ್ಲಿ ಪುಳಕಿತರಾದರು. ಕೆಲವರು ಮಳೆಗೆ ಮೈಒಡ್ಡಿ ಸಂಭ್ರಮಪಟ್ಟರು.
ರಟ್ಟಿಹಳ್ಳಿ, ಹಿರೇಕೆರೂರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಉತ್ತಮವಾದ ಮಳೆಯಾಗಿದೆ. ರಾಣೆಬೆನ್ನೂರ ಭಾಗದಲ್ಲಿ ಸಂಜೆ ಕೆಲಕಾಲ ಜಿಟಿಜಿಟಿ ಮಳೆಯಾಗಿದೆ. ಕೆಲವೆಡೆ ಮಳೆ ಸುರಿಯದೇ ನಿರಾಶೆ ಮೂಡಿಸಿದೆ.
ಬಿತ್ತನೆ ಆರಂಭಿಸಬಹುದು
ಈ ಮಳೆಗೆ ಮುಂಗಾರು ಪ್ರವೇಶ ಆಗಿದೆ ಎನ್ನಬಹುದು. ಆದರೆ, ಈ ಬಾರಿ ವಾಡಿಕೆಯಷ್ಟು ಮಳೆ ಆಗುವ ಅನುಮಾನವಿದೆ. ಹಾವೇರಿ, ಗುತ್ತಲ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಹಾಗಾಗಿ, ಮಳೆ ಚೆನ್ನಾಗಿ ಆಗಿರುವ ಪ್ರದೇಶದಲ್ಲಿ ರೈತರು ಈಗ ಬಿತ್ತನೆ ಮಾಡಬಹುದು. ಮೆಕ್ಕೆಜೋಳ, ಸೋಯಾಬೀನ್, ಶೇಂಗಾ, ಹತ್ತಿ ಬಿತ್ತಬಹುದು. ಪ್ರತಿ ವರ್ಷದಂತೆ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಹಾಕಬಾರದು, ಕಡಿಮೆ ಗೊಬ್ಬರ ಹಾಕಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಭದ್ರಪ್ಪ ಬಿ.ಎಚ್. ‘ವಿಜಯವಾಣಿ’ ಮೂಲಕ ರೈತರಿಗೆ ಸಲಹೆ ನೀಡಿದ್ದಾರೆ. ಕ್ಷೇತ್ರದಲ್ಲಿ ಬಿತ್ತನೆ ಬೀಜ, ಗೊಬ್ಬರದ ಕೊರತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.