ಹಾವೇರಿ: ತ್ಯಾಗ ಮತ್ತು ಬಲಿದಾನದ ಮೂಲಕ ಬದುಕಿನುದ್ದಕ್ಕೂ ದೇಶಪ್ರೇಮವನ್ನು ರೂಢಿಸಿಕೊಂಡು ಹುತಾತ್ಮರಾದ ಮೈಲಾರ ಮಹಾದೇವಪ್ಪನವರು ಯುವ ಸಮೂಹಕ್ಕೆ ಸದಾ ಪ್ರೇರಣಾದಾಯಕ ಶಕ್ತಿ ಎಂದು ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಧರ್ಮದರ್ಶಿ ವಿ.ಎನ್.ತಿಪ್ಪನಗೌಡ್ರ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ವೀರಸೌಧದಲ್ಲಿ ಶನಿವಾರ ಆಯೋಜಿಸಿದ್ದ ಮೈಲಾರ ಮಹಾದೇವಪ್ಪನವರ 113ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳಿಗೆ ಮಾರು ಹೋಗಿದ್ದ ಮೈಲಾರ ಮಹಾದೇವಪ್ಪನವರು ದೇಶ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ಬ್ರಿಟಿಷರ ವಿರುದ್ಧದ ನಿರ್ಣಾಯಕ ಹೋರಾಟದಲ್ಲಿ ಪಾಲ್ಗೊಂಡು ಅಖಂಡ ಧಾರವಾಡ ಜಿಲ್ಲೆಯಲ್ಲಿ ಯುವ ಸಮೂಹವನ್ನು ಆಕರ್ಷಿಸಿದ್ದರು. ತಾಯ್ನಡಿಗೆ ಹೋರಾಡುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ದೇಶದ ಸ್ವಾತಂತ್ರ್ಯದ ಕನಸು ಕಂಡಿದ್ದರು. ಅಂಥ ಧೀಮಂತ ಹೋರಾಟಗಾರ ಬದುಕಿದ 32 ವರ್ಷದಲ್ಲಿ ನಾಡಿನ ಗಮನ ಸೆಳೆದಿದ್ದರು ಎಂದು ಸ್ಮರಿಸಿದರು.
ಗ್ರಾಮ ಸ್ವರಾಜ್ ಅಭಿಯಾನದ ರಾಜ್ಯ ಸಂಚಾಲಕ ಆವರಗೆರೆ ರುದ್ರಮುನಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕೆ ತಮ್ಮ ಜೀವ ಮತ್ತು ಜೀವನವನ್ನು ಮುಡಿಪಿಟ್ಟ ಹುತಾತ್ಮ ಮೈಲಾರ ಮಹಾದೇವಪ್ಪನವರ ತ್ಯಾಗ ಮತ್ತು ಬಲಿದಾನವನ್ನು ನವಪೀಳಿಗೆಗೆ ಮನವರಿಕೆ ಮಾಡಿಕೊಡಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹಾದೇವಪ್ಪನವರ ಜನ್ಮದಿನವನ್ನು ರಾಜ್ಯಾದ್ಯಂತ ಆಚರಿಸಲು ಕರೆ ಕೊಡಬೇಕು. ಟ್ರಸ್ಟ್ ಕೂಡ ಈ ನಿಟ್ಟಿನಲ್ಲಿ ಮುಂದಡಿ ಇಡಬೇಕು ಎಂದರು.
ವೀರಸೌಧದಲ್ಲಿರುವ ಮೈಲಾರ ಮಹಾದೇವಪ್ಪನವರ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ನಗರದಲ್ಲಿನ ಮೈಲಾರ ಮಹಾದೇವಪ್ಪನವರ ಪುತ್ಥಳಿಗೆ ಹೂಮಾಲೆ ಅರ್ಪಿಸಿ, ಗೌರವ ಸಲ್ಲಿಸಲಾಯಿತು.
ಸಾಕ್ಷ್ಯಚಿತ್ರ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ, ಹೇಮಣ್ಣ ಗಾಣಿಗೇರ, ಬಸವರಾಜ ಗಾಣಿಗೇರ, ಪರಮೇಶಪ್ಪ ಮೈಲಾರ, ಮಹಾದೇವಪ್ಪ ಮೈಲಾರ, ಸುಭಾಷ ಮಡಿವಾಳರ, ಷಣ್ಮುಖಯ್ಯ ಕಿತ್ತೂರುಮಠ, ಮಂಜಯ್ಯ ಅಡವಿಮಠ, ಮಂಜನಗೌಡ ಹೊಸಗೌಡ್ರ, ಮಾರುತಿ ಹೊಂಬರಡಿ, ಇತರರು ಉಪಸ್ಥಿತರಿದ್ದರು.