ಜಿಲ್ಲೆ

ಮಹಿಳಾ ಆಯೋಗದ ಅಧ್ಯಕ್ಷೆ ಪ್ರವಾಸ 4ರಿಂದ; ಮೂರು ದಿನ ಜಿಲ್ಲೆಯಲ್ಲಿ ಡಾ.ನಾಗಲಕ್ಷ್ಮೀ ಚೌಧರಿ ಸಂಚಾರ

ಹಾವೇರಿ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಆಗಸ್ಟ್ 4ರಿಂದ 6ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು, ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಆ.4ರಂದು ಹಾವೇರಿಯಲ್ಲಿ ಬೆಳಗ್ಗೆ 11.30ರಿಂದ ಜಿಲ್ಲೆಯ ಎಲ್ಲ ಪಿಯು ಹಾಗೂ ಪದವಿ ಕಾಲೇಜ್‌ಗಳ ವಿದ್ಯಾರ್ಥಿನಿಯರ ಜತೆಗೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 2.45ಕ್ಕೆ ಶಿಗ್ಗಾಂವಿ ತಾಲೂಕು ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿನಿಯರು ಹಾಗೂ ಮಹಿಳಾ ಬೋಧಕರೊಂದಿಗೆ ಸಂವಾದ ನಡೆಸಲಿದ್ದಾರೆ. ಸಂಜೆ 4 ಗಂಟೆಗೆ ವಿಶ್ವವಿದ್ಯಾಲಯದ ಮಹಿಳಾ ವಸತಿ ನಿಲಯಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 6.15ಕ್ಕೆ ಹಾವೇರಿಯಲ್ಲಿ ಬಿ.ಸಿ.ಎಂ.ಪೋಸ್ಟ್ ಮೆಟ್ರಿಕ್ ಬಾಲಕಿಯರ ಹಾಸ್ಟೆಲ್‌ಗೆ ಭೇಟಿ ನೀಡಲಿದ್ದಾರೆ.

ಆ.5ರಂದು ಬೆಳಗ್ಗೆ 10 ಗಂಟೆಗೆ ಬ್ಯಾಡಗಿ ತಾಲೂಕು ಹಂಸಭಾವಿಯ ಸರ್ವೇ ನಂ.105ರಲ್ಲಿ ವಾಸವಿರುವ ಅಲೆಮಾರಿ ಸಿಂಧೋಳು ಸಮುದಾಯದವರನ್ನು ಭೇಟಿ ಮಾಡಲಿದ್ದಾರೆ. ಬೆಳಗ್ಗೆ 11.30ಕ್ಕೆ ಹಿರೇಕೆರೂರ ಕಾರ್ಮಿಕ ಭವನದಲ್ಲಿ ಜಿಲ್ಲೆಯ ಅಲೆಮಾರಿ ಸಮುದಾಯಗಳ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಸುವರು. ಮಧ್ಯಾಹ್ನ 1.30ಕ್ಕೆ ಹಿರೇಕೆರೂರ ತಾಲೂಕು ಆಸ್ಪತ್ರೆಗೆ ಭೇಟಿ, ಮಧ್ಯಾಹ್ನ 3.45ಕ್ಕೆ ಹಾವೇರಿ ಮಹಿಳಾ ಪೊಲೀಸ್ ಠಾಣೆ ಹಾಗೂ ಸಾಂತ್ವನ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 6 ಗಂಟೆಗೆ ಸಮಾಜ ಕಲ್ಯಾಣ ಇಲಾಖೆಯ ಪೋಸ್ಟ್ ಮೆಟ್ರಿಕ್ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಲಿದ್ದಾರೆ.

ಆ.6ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಮಹಿಳಾ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.