ಹಾವೇರಿ: ಎಸ್‌ಸಿ ಒಳ ಮೀಸಲಾತಿ ವರ್ಗೀಕರಣಕ್ಕಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ನ.11ರಂದು ‘ಚಲೋ ಹೈದರಾಬಾದ್’ ‘ಮಾದಿಗರ ವಿಶ್ವರೂಪ ಮಹಾಸಮಾವೇಶ’ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ಯಾಯಕ್ಕೆ ಒಳಗಾದ ಸಮುದಾಯದ ಒಳ ಮೀಸಲಾತಿಗೆ ಆಗ್ರಹಿಸಿ ಸತತವಾಗಿ ಮೂರು ದಶಕಗಳಿಂದ ಹೋರಾಡಲಾಗುತ್ತಿದೆ. ದೇಶಾದ್ಯಂತ ಪರಿಶಿಷ್ಟ ಜಾತಿಗಳ 101 ಜಾತಿಗಳಿಗೆ ಒಳ ಮೀಸಲಾತಿ ನೀಡುವ ಹೋರಾಟ ಅಂತಿಮ ಹಂತಕ್ಕೆ ತಲುಪಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ರಾಜ್ಯ ಸರ್ಕಾರ ಎ,ಬಿ,ಸಿ, ವರ್ಗಾವಣೆ ಮಾಡಿ ಒಳಮೀಸಲಾತಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಅವಧಿ ಮುಗಿಯುತ್ತಿದೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ವಿಧೇಯಕ ಅಂಗೀಕರಿಸಲಿ ಎಂದು ಒತ್ತಾಯಿಸಲು ಈ ಸಮಾವೇಶ ಆಯೋಜಿಸಲಾಗಿದೆ ಎಂದರು.
ಸಮಾವೇಶದಲ್ಲಿ ಪಾಲ್ಗೊಂಡು ಮನವಿ ಸ್ವೀಕರಿಸಲು ಪ್ರಧಾನಿ ಮೋದಿ ಅವರೇ ಒಪ್ಪಿದ್ದಾರೆ. ಮಾದಿಗರ ಶಕ್ತಿ ಪ್ರದರ್ಶನ ಇದಾಗಿದೆ. ದಕ್ಷಿಣ ಭಾರತದ ಎಲ್ಲ ಮಾದಿಗರು ಒಂದೇ ವೇದಿಕೆಗೆ ಬರಲಿದ್ದಾರೆ. ಒಳಮೀಸಲಾತಿ ಜಾರಿಗೊಂಡರೆ ರಾಜಕೀಯವಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಜಿಲ್ಲೆಯಿಂದ ಹೆಚ್ಚು ಜನ ಸಮಾವೇಶಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.
ಉತ್ತರ ಕರ್ನಾಟಕ ವಿಭಾಗೀಯ ಸಂಚಾಲಕ ಮಂಜುನಾಥ ಕೊಂಡಪಲ್ಲಿ, ಸತ್ಯನಾರಾಯಣ ಎಂ., ಉಡಚಪ್ಪ ಮಾಳಗಿ, ಸುಭಾಷ ಬೆಂಗಳೂರು, ಇತರರಿದ್ದರು.