ಹಾವೇರಿ: ಅಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಮೂಢನಂಬಿಕೆ, ಜಾತಿ, ಮೇಲು-ಕೀಳು, ಬಡವ-ಬಲ್ಲಿದ ಎನ್ನುವ ಬೇದ- ಭಾವದ ವಿರುದ್ಧ ತಮ್ಮ ಸಾಹಿತ್ಯ ರಚನೆಯ ಮೂಲಕ ಸಿಡಿದೆದ್ದವರು ದಾಸಶ್ರೇಷ್ಠ ಕನಕದಾಸರು ಎಂದು ಲಿಡಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಹೇಳಿದರು.
ಇಲ್ಲಿನ ಮೈಲಾರ ಮಹದೇವಪ್ಪ ವೃತ್ತದಲ್ಲಿ ಸೋಮವಾರ ಅಖಿಲ ಕರ್ನಾಟಕ ಆಧಿಜಾಂಬವ ಸಂಘ ಹಾಗೂ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಭಕ್ತ ಕನಕದಾಸರ 537ನೇ ಜಯಂತಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಕನಕದಾಸರು ಹಲವು ದಾಸರ ಮನೆಯ ಹೊಲೆಯದಾಸನು ನಾನು, ಕುಲವಿಲ್ಲದ ದಾಸ ಕುರುಬದಾಸ ಛಲಧಿ ನಿನ್ನ ಭಜಿಪರ ಮನೆಯ ಮಾದಿಗೆ ದಾಸ ಸಲೆ ಮುಕ್ತಿ ಪಾಲಿಸೆನ್ನೊಡೆಯ ಕೇಶವನೆ ಎಂದು ತಮ್ಮ ಕೀರ್ತನೆಯಲ್ಲಿ ಹೇಳುವ ಮೂಲಕ ಜಾತಿ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದರು.
ಕನಕದಾಸರ ಜನ್ಮಭೂಮಿ ಬಾಡದಲ್ಲಿ, ಕನಕದಾಸರ ಭವ್ಯವಾದ ಅರಮನೆ, ಯಾತ್ರಿ ನಿವಾಸ, ಕನಕದಾಸರ ದೇವಸ್ಥಾನ, ರಸ್ತೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಹಾವೇರಿ ಲೋಕಸಭಾ ಸದಸ್ಯರು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ. ಕನಕದಾಸರ ಕರ್ಮ ಭೂಮಿ ಕಾಗಿನೆಲೆಯಲ್ಲಿಯೂ ಸರ್ಕಾರದ ಅನುದಾನ ನೀಡಿ ಅಲ್ಲಿಯೂ ಸಹ ಅಭಿವೃದ್ಧಿ ಮಾಡಿದ ಕೀರ್ತಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲುತ್ತದೆ ಎಂದರು.
ಜಿಲ್ಲಾ ಆದಿಜಾಂಬವ ಸಂಘದ ಅಧ್ಯಕ್ಷ ನಾಗರಾಜ ಮಾಳಗಿ, ಜಿಲ್ಲಾ ದಂಡೋರ ಮಾದಿಗ ಸಮಿತಿಯ ಅಧ್ಯಕ್ಷ ಸುಭಾಸ ಬೆಂಗಳೂರ, ಶೇಖಪ್ಪ ಕಳ್ಳಿಮನಿ, ವಿಜಯಕುಮಾರ ಹುಲಿಕಂತಿಮಠ, ಮಲ್ಲೇಶಪ್ಪ ಕಡಕೋಳ, ಸಚಿನ ಉಪ್ಪಾರ, ಸತೀಶ ಮಡಿವಾಳರ, ಸುನೀಲ ದಂಡಮ್ಮನವರ, ಶರಣು ಭಜಂತ್ರಿ, ದುರಗಪ್ಪ ಮಾಳಗಿ, ಜಯಾನಂದ ಚರಂತಿಮಠ, ಸುರೇಶ ಕಟಗೇರಿ, ಶಂಕ್ರಪ್ಪ ಹೊಸಳ್ಳಿ, ಇತರರಿದ್ದರು.