ಜಿಲ್ಲೆ

ಹಾವೇರಿ: ಕಬ್ಬಿನ ಹೊಲದಲ್ಲಿ ಚಿರತೆ ಮರಿ ಪ್ರತ್ಯಕ್ಷ

Haveri - Desk - Ganapati Bhat

ಹಾವೇರಿ: ತಾಲೂಕು ಕುಳೇನೂರು ಗ್ರಾಮದ ಕಬ್ಬಿನ ಹೊಲದಲ್ಲಿ ಭಾನುವಾರ ಎರಡು ಚಿರತೆ ಮರಿಗಳು ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಭಾರಿ ಆತಂಕ ಮೂಡಿಸಿದೆ.

ಗ್ರಾಮದ ಜಗದೀಶ ಕೂರ್ಲಿಂಗಪ್ಪ ಮತ್ತಿಹಳ್ಳಿ ಅವರ ಹೊಲದಲ್ಲಿ ಕಬ್ಬು ಕಟಾವು ಮಾಡುವ ಸಂದರ್ಭದಲ್ಲಿ ಎರಡು ಚಿರತೆ ಮರಿಗಳು ಪತ್ತೆಯಾಗಿವೆ. ಚಿರತೆ ಮರಿಗಳನ್ನು ಕಂಡು ಆತಂಕಕ್ಕೀಡಾದ ರೈತರು ಅಕ್ಕಪಕ್ಕದಲ್ಲಿ ತಾಯಿ ಚಿರತೆ ಇರಬಹುದು ಎಂದು ಹುಡುಕಾಡಿದರು. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಚಿರತೆ ಮರಿಗಳು ಕಾಣಿಸಿಕೊಂಡಿದ್ದರಿಂದ ಸ್ಥಳೀಯ ರೈತರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯವರು ತಾಯಿ ಚಿರತೆ ಸಮೇತ ಮರಿಗಳನ್ನು ಹಿಡಿದು ಅರಣ್ಯದಲ್ಲಿ ಬಿಡಬೇಕು ಎಂದು ಸ್ಥಳೀಯರಾದ ಸದಾನಂದ ಹಾದಿಮನಿ ಒತ್ತಾಯಿಸಿದ್ದಾರೆ.

ಸ್ಥಳದಲ್ಲೇ ಕಾವಲು

ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಚಿರತೆ ಮರಿಗಳು ಸಿಕ್ಕ ಜಾಗದಲ್ಲೇ ಇರಿಸಿ, ತಾಯಿ ಚಿರತೆ ಆಗಮಿಸುವುದನ್ನೇ ಕಾಯುತ್ತಿದ್ದಾರೆ. ಮರಿಗಳು ಕಾಣದಿದ್ದರೆ ತಾಯಿ ಚಿರತೆ ಆತಂಕಕ್ಕೀಡಾಗಬಹುದು ಎಂದು ಸ್ಥಳದಲ್ಲೇ ಮರಿಗಳನ್ನು ಬಿಟ್ಟು ಕಾಯುತ್ತಿದ್ದಾರೆ.