ಜಿಲ್ಲೆ

ಖಾರದ ಪುಡಿ, ಮಂಡಕ್ಕಿ ಭಟ್ಟಿ ಸ್ಥಳಾಂತರಿಸಿ; ಎಲ್‌ಬಿಎಸ್ ಮಾರುಕಟ್ಟೆ ನಿವಾಸಿಗಳು, ವ್ಯಾಪಾರಸ್ಥರ ಆಗ್ರಹ

ಹಾವೇರಿ: ನಗರದ ಲಾಲ್ ಬಹಾದ್ದೂರ್ ಶಾಸ್ತ್ರೀ (ಎಲ್‌ಬಿಎಸ್) ಮಾರುಕಟ್ಟೆಯಲ್ಲಿ ಇರುವ ಖಾರದ ಪುಡಿ ತಯಾರಿಸುವ ಯಂತ್ರಗಳು, ಮಂಡಕ್ಕಿ ಭಟ್ಟಿಗಳಿಂದ ತೀವ್ರ ಕಿರಿಕಿರಿ ಉಂಟಾಗಿದ್ದು, ಈ ಕೂಡಲೇ ಇವುಗಳನ್ನು ಸ್ಥಳಾಂತರಿಸಬೇಕು ಎಂದು ಸ್ಥಳೀಯ ನಿವಾಸಿಗಳು ಹಾಗೂ ವ್ಯಾಪಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಎಲ್‌ಬಿಎಸ್ ಮಾರುಕಟ್ಟೆ ಬಳಿ ರಸ್ತೆಗೆ ಅಡ್ಡಲಾಗಿ ನಿಂತು ವಾಹನಗಳ ಸಂಚಾರ ಬಂದ್ ಮಾಡಿ, ಪ್ಲೇಕಾರ್ಡ್ ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಖಾರದ ಪುಡಿ ಮಷಿನ್ ಹಾಗೂ ಮಂಡಕ್ಕಿ ಭಟ್ಟಿಗಳಿಂದಾಗಿ ನಿತ್ಯವೂ ಧೂಳು, ಅತಿಯಾದ ಶಬ್ದ ಹಾಗೂ ಖಾರದ ಘಾಟು ಉಂಟಾಗುತ್ತಿದೆ. ಮನೆಯಿಂದ ಹೊರಗೂ ಒಳಗೂ ಸಮಸ್ಯೆ ಸೃಷ್ಟಿಯಾಗುತ್ತಿದೆ. ಶ್ವಾಸಕೋಶದ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಈ ಕುರಿತು ಈ ಹಿಂದೆ ನಗರಸಭೆ ಆಯುಕ್ತರು, ಎಸಿ, ತಹಸೀಲ್ದಾರ್, ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು. ತಿಂಗಳಾದರೂ ಯಾರೂ ಈ ಬಗ್ಗೆ ಗಮನಹರಿಸುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟವರು ಈ ಸಮಸ್ಯೆಗೆ ಮುಕ್ತಿ ನಿಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಗಣೇಶ ಹುಲಸಂಗಿ, ಮುಸ್ತಾಕ್ ಯಡ್ರಾಮಿ, ಧರ್ಮರಾಜ ಕೀರ್ತಪ್ಪನವರ, ರಾಜು ಹುಲಸಂಗಿ, ಮಹಾಂತೇಶ ಅಂಬಿಗೇರ, ಇತರರಿದ್ದರು.