ಜಿಲ್ಲೆ

ಕೆಆರ್‌ಎಸ್‌ನಿಂದ ಲಂಚಮುಕ್ತ ಅಭಿಯಾನ; ಯಾರಾದರೂ ಲಂಚ ಕೇಳಿದರೆ ಸಹಾಯವಾಣಿ (88617-75862)ಗೆ ಕರೆ ಮಾಡಿ

ಹಾವೇರಿ: ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದಿಂದ ಜಿಲ್ಲೆಯಲ್ಲಿ ಲಂಚಮುಕ್ತ ಅಭಿಯಾನ ಆರಂಭಿಸಲಾಗಿದ್ದು, ಸಾರ್ವಜನಿಕರ ಬಳಿ ಸರ್ಕಾರಿ ಅಧಿಕಾರಿಗಳು ಯಾರಾದರೂ ಲಂಚ ಕೇಳಿದರೆ ಸಹಾಯವಾಣಿ ಮೊ.ಸಂ. 88617-75862ಗೆ ಕರೆ ಮಾಡಿ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಜ್ಞಾನಸಿಂಧು ಸ್ವಾಮಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಂಚಮುಕ್ತ ಅಭಿಯಾನದ ಕರಪತ್ರಗಳನ್ನು ಸರ್ಕಾರಿ ಅಧಿಕಾರಿ, ಸಿಬ್ಬಂದಿಗೆ ವಿತರಿಸಿ ಲಂಚಮುಕ್ತಗೊಳಿಸಲು ಮನವಿ ಮಾಡಿಕೊಳ್ಳಲಾಗಿದೆ. ಪ್ರತಿ ಬುಧವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಶಿಗ್ಗಾಂವಿಯ ತಾಲೂಕು ಕಚೇರಿ ಮತ್ತು ಪುರಸಭೆಯ ಬಳಿ ಪಕ್ಷದ ಕಾರ್ಯಕರ್ತರು ಲಭ್ಯವಿರುತ್ತಾರೆ. ಪ್ರತಿ ಶುಕ್ರವಾರ ಸವಣೂರ ತಾಲೂಕು ಕಚೇರಿ ಮತ್ತು ಪುರಸಭೆಯ ಬಳಿ ಅಭಿಯಾನ ನಡೆಯಲಿದೆ. ಸರ್ಕಾರಿ ಸೇವೆ ಮತ್ತು ಸೌಲಭ್ಯಗಳಿಗೆ ಸಂಬಂಧಿಸಿದ ಯಾವುದೇ ಕೆಲಸಗಳಿಗೆ ಸಾರ್ವಜನಿಕರು ಇವರನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು ಎಂದರು.
ಜಿಲ್ಲಾ ಉಸ್ತುವಾರಿ ಚಂದ್ರಶೇಖರ ಮಠದ, ರಾಜ್ಯ ಯುವ ಘಟಕದ ಕಾರ್ಯದರ್ಶಿ ವೆಂಕಟೇಶ ಯುವಧ್ವನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಕಾಡಶೆಟ್ಟಿಹಳ್ಳಿ, ಜಿಲ್ಲಾ ಕಾರ್ಯದರ್ಶಿಗಳಾದ ಚರಣರಾಜ ರೊಡ್ಡನವರ, ಧರ್ಮರಾಜ ಬಿಂದಲಗಿ, ಈರಣ್ಣ ಬಾರಕೇರ, ಇತರರಿದ್ದರು.
ರವಿಕೃಷ್ಣಾ ರೆಡ್ಡಿ ಶಿಗ್ಗಾಂವಿ ಅಭ್ಯರ್ಥಿ
ಶಿಗ್ಗಾಂವಿ ಉಪ ಚುನಾವಣೆಗೆ ಕೆಆರ್‌ಎಸ್ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಜ್ಞಾನಸಿಂಧು ಸ್ವಾಮಿ ತಿಳಿಸಿದರು.