ಜಿಲ್ಲೆ

ಕ್ವಿಟ್ ಇಂಡಿಯಾ ಮಾದರಿ ಭ್ರಷ್ಟರನ್ನು ಓಡಿಸಿ ಅಭಿಯಾನ; ಜಾಥಾಕ್ಕೆ ಕೆಆರ್‌ಎಸ್ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಚಾಲನೆ

ಹಾವೇರಿ: ಮಹಾತ್ಮ ಗಾಂಧೀ ಬ್ರಿಟೀಷರನ್ನು ಭಾರತದಿಂದ ತೊಲಗಿಸಲು ಕೈಗೊಂಡ ನಿರ್ಣಾಯಕ ಕ್ವಿಟ್ ಇಂಡಿಯಾ ಹೋರಾಟವು ಸಾವಿರಾರು ಸ್ವಾತಂತ್ರೃ ಸೇನಾನಿಗಳ ತ್ಯಾಗದಿಂದ ಯಶಸ್ವಿಯಾಯಿತು. ಇಂತಹ ಮಹತ್ವದ ದಿನದಂದು, ಭ್ರಷ್ಟರನ್ನು ಓಡಿಸಿ, ಶಿಗ್ಗಾಂವಿ ಕ್ಷೇತ್ರದ ಯುವಕರನ್ನು ರಾಜಕೀಯಕ್ಕೆ ಆಹ್ವಾನಿಸುವ ಉದ್ದೇಶದಿಂದ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರವಿ ಕೃಷ್ಣಾರೆಡ್ಡಿ ಹೇಳಿದರು.
ನಗರದ ಮೈಲಾರ ಮಹಾದೇವ ಸ್ಮಾರಕದಲ್ಲಿ ಗುರುವಾರ ಕ್ವಿಟ್ ಇಂಡಿಯಾ ಚಳುವಳಿಯ 82ನೇ ವರ್ಷದ ಸ್ಮರಣಾರ್ಥ ಕೆಆರ್‌ಎಸ್ ಪಕ್ಷದಿಂದ ಆಯೋಜಿಸಿರುವ ‘ಭ್ರಷ್ಟರನ್ನು ರಾಜಕೀಯ ಬಿಟ್ಟು ತೊಲಗಿಸಿ, ಯುವಕರೇ ರಾಜಕೀಯಕ್ಕೆ ಬನ್ನಿ’ ಎಂಬ ಘೋಷವಾಕ್ಯದ ಬೈಕ್ ಮತ್ತು ಕಾರ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ವಿಟ್ ಇಂಡಿಯಾ ಚಳುವಳಿಯ ರೀತಿಯಲ್ಲಿ, ಈ ಜಾಥಾ ರಾಜ್ಯದ ರಾಜಕಾರಣದ ದಿಕ್ಕನ್ನು ಸಂಪೂರ್ಣವಾಗಿ ಬದಲಾಯಿಸುವ ಮಹತ್ವದ ಕಾರ್ಯ ಮಾಡಲಿದೆ. ಅದಕ್ಕಾಗಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ ಮಾತನಾಡಿ, ಇಂದು ರಾಜಕಾರಣ ದಂಧೆಯಾಗಿದ್ದು, ಇದನ್ನು ನಿವಾರಿಸುವ ಕೆಲಸವನ್ನು ಕೆಆರ್‌ಎಸ್ ಪಕ್ಷ ಮಾಡುತ್ತಿದೆ. ಇದಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ಎಸ್.ಎಚ್., ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ ಸಿ.ಎನ್., ರಾಜ್ಯ ಕಾರ್ಯದರ್ಶಿಗಳಾದ ರಘು ಜಾಣಗೆರೆ, ರಘುಪತಿ ಭಟ್, ಸೋಮಸುಂದರ ಕೆ.ಎಸ್., ಜ್ಞಾನಸಿಂಧು ಸ್ವಾಮಿ, ಮಲ್ಲಿಕಾರ್ಜುನಯ್ಯ ಬಿ. ಎಸ್., ನರಸಿಂಹಮೂರ್ತಿ, ವಿಜಯಕುಮಾರ ಯು.ಬಿ., ಮಂಜುನಾಥ ಎಸ್., ಸಂಘಟನಾ ಕಾರ್ಯದರ್ಶಿಗಳಾದ ಚಂದ್ರಶೇಖರ ಮಠದ, ಬಸಪ್ಪ ಕುಂಬಾರ, ಹಬೀಬ ಸಾಬ, ಎಲ್.ಜೀವನ, ಕೃಷ್ಣ ವಿ.ಬಿ., ದೀಪಾ ಮನೂರ, ಕೇಶವಮೂರ್ತಿ, ಗಣೇಶ, ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ವಿವಿಧೆಡೆ ಸಂಚಾರ
ಆರಂಭದಲ್ಲಿ, ಮೈಲಾರ ಮಹದೇವ ಅವರನ್ನು ಸ್ಮರಿಸಿ ಲಾವಣಿಗಳನ್ನು ಹಾಡಲಾಯಿತು. ನಂತರ ಮೈಲಾರ ಮಹಾದೇವ ಹಾಗೂ ಇತರ ಸ್ವಾತಂತ್ರ್ಯ ಹೋರಾಟಗಾರರ ಸಮಾಧಿಗಳಿಗೆ ನಮನ ಸಲ್ಲಿಸಲಾಯಿತು. ಹಾವೇರಿ ಪಟ್ಟಣದಲ್ಲಿ ಚಾಲನೆಗೊಂಡ ಜಾಥಾ ಶಿಗ್ಗಾಂವಿ ಕ್ಷೇತ್ರದ ಹಲಸೂರು, ತೆವರಮೆಳ್ಳಹಳ್ಳಿ, ಕುಣಿಮೆಳ್ಳಿಹಳ್ಳಿ, ಮನ್ನಂಗಿ, ಮೆಳ್ಳಿಗಟ್ಟಿ, ಹುರಳಿಕುಪ್ಪಿ, ಚಲ್ಲಾಳ, ಮಾಹೂರ, ಚಿಕ್ಕಬೂದಿಹಾಳ, ಫಕೀರನಂದಿಹಳ್ಳಿ, ಬಂಕಾಪುರ, ಗುಡ್ಡದ ಚನ್ನಾಪುರ, ಕುಂದೂರು, ಮಣ್ಣೂರ, ತೆಗ್ಗಿಹಳ್ಳಿ, ಸವಣೂರು, ಚಿಲ್ಲೂರು, ಚಿಲ್ಲೂರು ಬಡ್ನಿ, ಚಡವಾಳ, ಕಾರಡಗಿ, ಮಾದಾಪುರ, ಹುಲಗೂರು, ಅತ್ತಿಗೀರಿ ಗ್ರಾಮಗಳ ಮೂಲಕ ಸಾಗಿ ಶಿಶುವಿನಹಾಳದವರೆಗೆ ನಡೆಯಿತು.