ಹಾವೇರಿ: ದೇಶದ ಪ್ರಸ್ತುತ ಆರ್ಥಿಕತೆಯಲ್ಲಿ ಡಿಜಿಟಲೀಕರಣದ ಮಹತ್ವ ಹೆಚ್ಚಾಗುತಿದ್ದು, ಜತೆಗೆ ಆರ್ಥಿಕತೆಯು ವೇಗವಾಗಿ ಬದಲಾವಣೆ ಆಗುತ್ತಿರುವುದರಿಂದ ಇಂದಿನ ಯುವ ಜನಾಂಗದಲ್ಲಿ ಗಣಿತಾತ್ಮಕ ಮತ್ತು ಸಂಖ್ಯಾತ್ಮಕ ಅರ್ಥಶಾಸ್ತ್ರದ ಕುರಿತು ಮಾಹಿತಿ ನೀಡುವುದು ಅಗತ್ಯವಾಗಿದೆ ಎಂದು ದಾವಣಗೆರೆ ವಿಶ್ವೃವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಚೇರ್ಮನ್ ಡಾ.ಹುಚ್ಚೇಗೌಡ ಅಭಿಪ್ರಾಯಪಟ್ಟರು.
ನಗರದ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಿಂದ ಇತ್ತೀಚೆಗೆ ಆಯೋಜಿಸಿದ್ದ ‘ಬೇಸಿಕ್ ಡಾಟಾ ಅನಲಿಟಿಕಲ್ ಟೆಕ್ನಿಕ್ಸ್ ಯೂಸಿಂಗ್ ಸ್ಟ್ಯಾಟಸ್ಟಿಕಲ್ ಪ್ಯಾಕೇಜ್ ಫಾರ್ ಸೋಶಿಯಲ್ ಸೈನ್ಸ್’ ವಿಷಯದ ಕುರಿತ ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅತಿ ವೇಗದಲ್ಲಿ ಆರ್ಥಿಕತೆ ಬೆಳೆಯುತ್ತಿರುವ ಸಂದರ್ಭದಲ್ಲಿ ಅಂಕಿ-ಅಂಶಗಳ ಮಾಹಿತಿ ಸಂಗ್ರಹಣೆಗಾಗಿ ಆಧುನಿಕ ತಂತ್ರಜ್ಞಾನದ ಮೊರೆ ಹೋಗುವುದು ಅನಿವಾರ್ಯವಿದೆ. ಅಷ್ಟೇ ಪ್ರಮಾಣದಲ್ಲಿ ಎದುರಿಸುತ್ತಿರುವ ಸವಾಲುಗಳು ಮತ್ತು ಆರ್ಥಿಕ ಸಮಸ್ಯೆಗಳನ್ನು ಸಮಗ್ರವಾಗಿ ವಿಶ್ಲೇಷಿಸಲು, ಅದರ ಪರಿಣಾಮ ತಿಳಿಯಲು ಸಂಶೋಧನಾತ್ಮಕವಾಗಿ ಪ್ರಾಥಮಿಕ ದತ್ತಾಂಶಗಳ ಸಂಗ್ರಹಣೆಯ ಕಾರ್ಯಾನುಕೂಲಕ್ಕೆ ಅನುಕೂಲವಾಗುವಂತೆ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಕಾರ್ಯಾಗಾರದ ವಿಷಯ ಸಮರ್ಪಕತೆಯನ್ನುಂಟು ಮಾಡುತ್ತದೆ ಎಂದರು.
ಕಾಲೇಜ್‌ನ ಸ್ಥಾನಿಕ ಮಂಡಳಿ ಕಾರ್ಯಾಧ್ಯಕ್ಷ ಡಾ.ಎಸ್.ಎಲ್ ಬಾಲೆಹೊಸೂರ ಅಧ್ಯಕ್ಷತೆ ವಹಿಸಿದ್ದರು. ಅಕ್ಕಿಆಲೂರಿನ ಸಿ.ಜಿ.ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯ ಡಾ.ವಿ.ಎಂ ಕುಮ್ಮೂರ, ಪ್ರಾಧ್ಯಾಪಕ ಪ್ರೊ.ಆರೋಕಿಯಾ ಅಮುತನ್ ವಿ. ಹಾಗೂ ಚಾಮರಾಜನಗರದ ಸಹಾಯಕ ಪ್ರಾಧ್ಯಾಪಕ ಡಾ.ಚೇತನ ಬಿ. ಉಪನ್ಯಾಸ ನೀಡಿದರು.
ಹಾವೇರಿ ವಿವಿ ಕುಲಸಚಿವ ಡಾ.ಎಸ್.ಟಿ ಬಾಗಲಕೋಟಿ, ಕಾಲೇಜ್ ಪ್ರಾಚಾರ್ಯ ಪ್ರೊ.ಎಂ.ಎಂ ಹೊಳ್ಳಿಯವರ, ವಿಭಾಗದ ಮುಖ್ಯಸ್ಥ ಪ್ರೊ.ಹೇಮಂತಕುಮಾರ ಸಿ.ಎಂ., ಐ.ಕ್ಯೂ.ಎ.ಸಿ. ಸಂಯೋಜಕಿ ಪ್ರೊ.ರೂಪಾ ಕೋರೆ, ಪ್ರೊ.ಸುಮಂಗಳ ಜಿ.ಎಂ., ಡಾ.ಸಂಜೀವ ಕುಮಾರ, ಪ್ರೊ.ನಯನಾ ಎಸ್., ರಾಜ್ಯದ ವಿವಿಧ ಕಾಲೇಜ್‌ಗಳ ಅರ್ಥಶಾಸ್ರ್ತ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಇತರರು ಉಪಸ್ಥಿತರಿದ್ದರು.