ಹಾವೇರಿ: ವಿದ್ಯಾರ್ಥಿ ಜೀವನದಲ್ಲಿ ಕಲಿಕೆ, ಗ್ರಹಿಕೆ, ಸಂಶೋಧನೆ, ಸಂವಹನದ ಜತೆಗೆ ಬದುಕಿನಲ್ಲಿ ಬರುವ ಅವಕಾಶಗಳ ಸದುಪಯೋಗಪಡಿಸಿಕೊಳ್ಳಬೇಕು. ಆಕಾಶಕ್ಕಿಂತ ಅವಕಾಶ ದೊಡ್ಡದು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕೆಂದು ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಡಾ.ವಿಜಯಲಕ್ಷ್ಮೀ ತಿರ್ಲಾಪೂರ ಅಭಿಪ್ರಾಯಪಟ್ಟರು.
ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಮಂಗಳವಾರ 2022-23ನೇ ಸಾಲಿನ ಕಾಲೇಜು ಒಕ್ಕೂಟ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ದಾರ್ಶನಿಕರು, ಸಂತರು, ಮಹಾಂತರು, ಕವಿ, ಸಾಹಿತಿಗಳು, ಸ್ವತಂತ್ರ್ಯವೀರರು ನಡೆದಾಡಿದ ಪುಣ್ಯಭೂಮಿ ಹಾವೇರಿಯಾಗಿದೆ. ಈ ನಾಡಿಗೆ ಹಲವಾರು ಕೊಡುಗೆಗಳನ್ನು ಕೊಟ್ಟ ಕೀರ್ತಿಯೂ ಇಲ್ಲಿಯ ಮಣ್ಣಿಗಿದೆ. ಈ ಮಣ್ಣಿನ ಗುಣದ ಗಣ್ಯತೆಯಿಂದಾಗಿ ಅನೇಕ ಮಹತ್ವದ ಕಾರ್ಯಗಳು ಈ ನಾಡಿನಲ್ಲಿ ಜರುಗಿದ್ದು ಬಹುದೊಡ್ಡ ಇತಿಹಾಸವಾಗಿದೆ. ಅವರಂತೆ ನೀವೂ ಸಾಧಕರ ಸಾಲಿನಲ್ಲಿ ಸೇರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜು ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಡಾ.ಎಸ್.ಎಲ್ ಬಾಲೆಹೊಸೂರು ಮಾತನಾಡಿ, ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವ ಮೂಲಕ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಿದ್ದು ತೃಪ್ತಿ ತಂದಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯ ಸಾಧನೆಯನ್ನು ಮಾಡಲೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ.ಸಿ ಕೊಳ್ಳಿ ಮಾತನಾಡಿ, ಜಿಲ್ಲೆಯಲ್ಲಿಯೇ ಅತ್ಯಂತ ಮಹತ್ವದ ಶೈಕ್ಷಣಿಕ ದಾಖಲೆಗಳನ್ನು ಬರೆದಿರುವ ನಮ್ಮ ಕಾಲೇಜು ವಿವಿಧ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆ ನೀಡಿದೆ. ಇಲ್ಲಿ ಕಲಿತಿರುವ ವಿದ್ಯಾರ್ಥಿಗಳು ವಿಶ್ವಮಟ್ಟದಲ್ಲಿ ಹೆಸರು ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪದಕ-ಪ್ರಮಾಣಪತ್ರ ವಿತರಿಸಲಾಯಿತು. ಹಲವು ಉಪನ್ಯಾಸಕರಿಗೆ ಸನ್ಮಾನಿಸಲಾಯಿತು. ಪದವಿ ಪ್ರಾಚಾರ್ಯೆ ಡಾ.ಸಂಧ್ಯಾ ಕುಲಕರ್ಣಿ ವಾರ್ಷಿಕ ವರದಿ ವಾಚಿಸಿದರು. ಕ್ರೀಡಾ ಒಕ್ಕೂಟದ ಕಾರ್ಯಾಧ್ಯಕ್ಷ ಡಾ.ಜಗದೀಶ ಹೊಸಮನಿ ವಿವಿಧ ಸ್ಪರ್ಧಾ ವಿಜೇತರ ವರದಿ ವಾಚಿಸಿದರು.
ಆಡಳಿತ ಮಂಡಳಿ ಸದಸ್ಯರಾದ ಸಿ.ಬಿ ಹಿರೇಮಠ, ಬಸವರಾಜ ಮಾಸೂರ, ಎಸ್.ಜೆ ಹೆರೂರ, ಜೆ.ಎಸ್ ಐರಣಿ, ಇತರರು ಉಪಸ್ಥಿತರಿದ್ದರು. ಅಕ್ಷರಾ ಮುಳಗುಂದ ಪ್ರಾರ್ಥಿಸಿದರು. ಕಾಲೇಜು ಒಕ್ಕೂಟದ ಉಪಾಧ್ಯಕ್ಷ ಪ್ರೊ.ಡಿ.ಎ ಕೊಲ್ಹಾಪುರೆ ಸ್ವಾಗತಿಸಿದರು. ಒಕ್ಕೂಟದ ಅಧ್ಯಕ್ಷೆ ಡಾ.ಎಂ.ಪಿ ಕಣವಿ ಪರಿಚಯಿಸಿದರು. ಕಾಲೇಜು ಒಕ್ಕೂಟದ ಕಾರ್ಯದರ್ಶಿ ಐಶ್ವರ್ಯ ಮಾನೇಗಾರ ವಂದಿಸಿದರು.