ಜಿಲ್ಲೆ

ರಚನಾತ್ಮಕ ಕಾರ್ಯಗಳ ಹರಿಕಾರ ಡಾ.ಪ್ರಭಾಕರ ಕೋರೆ

ಹಾವೇರಿ: ಶಿಕ್ಷಣಪ್ರೇಮಿ ಸಾಮಾಜಿಕ ಸೇವೆಯ ಜತೆಗೆ ರಚನಾತ್ಮಕ ಕಾರ್ಯಗಳ ಮೂಲಕ ಶೈಕ್ಷಣಿಕ ಕ್ರಾಂತಿಯ ಹರಿಕಾರರಾಗಿ ಆಧುನಿಕ, ಸ್ಫರ್ಧಾತ್ಮಕ ಯುಗಕ್ಕೆ ಕೆ.ಎಲ್.ಇ ಸಂಸ್ಥೆಯನ್ನು ಪ್ರಗತಿ ಪಥದತ್ತ ಮುನ್ನೆಲೆಗೆ ತಂದವರು ಡಾ.ಪ್ರಭಾಕರ ಕೋರೆಯವರು ಎಂದು ಡಾ.ಮಹಾದೇವಿ ಕಣವಿ ಹೇಳಿದರು.
ನಗರದ ಕೆ.ಎಲ್.ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಕಲಾ ಸ್ಪಂದನ ಹಾಗೂ ಸಿರಿಗನ್ನಡ ಸೇವಾ ಸಂಸ್ಥೆಯಿಂದ ಬುಧವಾರ ಜಂಟಿಯಾಗಿ ಆಯೋಜಿಸಿದ್ದ ಡಾ.ಪ್ರಭಾಕರ ಕೋರೆಯವರ 77ನೇ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಭಾಷಣ, ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣ, ಆರೋಗ್ಯ, ಸಾಮಾಜಿಕ, ರಾಜಕೀಯ ಸೇವೆಯೊಂದಿಗೆ ಅರ್ಥಪೂರ್ಣ ಬದುಕಿನೊಂದಿಗೆ 77ನೇ ವರ್ಷಕ್ಕೆ ಕಾಲಿಟ್ಟಿರುವ ಕೋರೆಯವರು ನಮಗೆಲ್ಲ ಮಾದರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಿಯು ಕಾಲೇಜ್ ಪ್ರಾಚಾರ್ಯ ಡಾ.ಜೆ.ಆರ್.ಶಿಂಧೆ ಮಾತನಾಡಿ, ಉತ್ತರ ಕರ್ನಾಟಕದ ಶೈಕ್ಷಣಿಕ ಪ್ರಗತಿಗೆ ಡಾ. ಪ್ರಭಾಕರ ಕೋರೆಯವರ ಕೊಡುಗೆ ಅಪಾರವಾದುದು. ನಾಡು-ನುಡಿಗೆ ಹಗಲಿರುಳು ಶ್ರಮಿಸಿದ ಧೀಮಂತ ವ್ಯಕ್ತಿತ್ವ ಅವರದ್ದು ಎಂದರು.
ಪದವಿ ಕಾಲೇಜ್ ಪ್ರಾಚಾರ್ಯೆ ಡಾ.ಸಂಧ್ಯಾ ಕುಲಕರ್ಣಿ ಬಹುಮಾನ ವಿತರಿಸಿ ಮಾತನಾಡಿದರು. ಪ್ರೊ.ಸಿದ್ದೇಶ್ವರ ಹುಣಸಿಕಟ್ಟಿಮಠ, ಪ್ರೊ.ಎನ್.ಎ.ಗಾಣಗಿ ಮಾತನಾಡಿದರು.
ರೇಖಾ ಪ್ರಾರ್ಥಿಸಿದರು. ಪ್ರೊ.ಎಂ.ಎಸ್.ಬೆಂಡಿಗೇರಿ ಸ್ವಾಗತಿಸಿದರು. ಪ್ರೊ.ಬಸವರಾಜ ಹೊಂಗಲ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಬಸವರಾಜೇಶ್ವರಿ ಜಿ.ಕೆ. ನಿರೂಪಿಸಿದರು. ಪ್ರೊ.ಗಿರೀಶ ಹೊಸಳ್ಳಿ ವಂದಿಸಿದರು.