ಹಾವೇರಿ: ವ್ಯವಸ್ಥೆಯ ಪರಿಧಿಯಲ್ಲಿ ಕಚೇರಿ ಮಹಾವಿದ್ಯಾಲಯಗಳ ಹೃದಯವಿದ್ದಂತೆ. ವಿದ್ಯಾರ್ಥಿಯ ಬದುಕು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ, ಕಚೇರಿ ಸಿಬ್ಬಂದಿಯ ಪಾತ್ರವೂ ಅಷ್ಟೇ ಮುಖ್ಯವಾದದ್ದು ಎಂದು ಕೊಪ್ಪಳದ ಶಿಕ್ಷಣಾಧಿಕಾರಿ ಕೃಷ್ಣಕುಮಾರ ದೇಸಾಯಿ ಅಭಿಪ್ರಾಯಪಟ್ಟರು.
ನಗರದ ಕೆ.ಎಲ್.ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ಕಚೇರಿ ಸಿಬ್ಬಂದಿ ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ‘ಆಡಳಿತ ಸಿಬ್ಬಂದಿಯ ತರಬೇತಿ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದರು.
ಕಚೇರಿ ಸಿಬ್ಬಂದಿ ಕಡತಗಳ ನಿರ್ವಹಣೆ, ದಾಖಲಾತಿ ಸಂರಕ್ಷಣೆ, ಆವಕ ಜಾವಕಗಳ ನಮೂದು ಕುರಿತ ಸಮಗ್ರ ಮಾಹಿತಿ ಹೊಂದಿರುತ್ತಾರೆ. ಇವುಗಳ ಜತೆಗೆ ಸಿಬ್ಬಂದಿ ಜಾಗತಿಕ ವ್ಯವಸ್ಥೆಯ ತಾಂತ್ರಿಕ ಮತ್ತು ಪರಿಣಾತ್ಮಕ ಅಂಶಗಳನ್ನು ಪರಿಚಯ ಮಾಡಿಕೊಳ್ಳುವುದರ ಮೂಲಕ ಉತ್ತಮ ಮತ್ತು ದಕ್ಷ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಸಿಎ ಸಂತೋಷ ಮಾಗಾವಿ ಮಾತನಾಡಿ, ಕಡತಗಳ ನಿರ್ವಹಣೆ ಮತ್ತು ನಿರ್ಮಾಣ ಕಾರ್ಯ ಬಹು ಮಹತ್ತರವಾದುದು. ಸರಳ ವಿಧಾನಗಳಿಂದ ಅವುಗಳ ಅವಗಾಹನೆಯ ಅವಶ್ಯವಿದೆ. ಲೆಕ್ಕಪತ್ರಗಳ, ದಾಖಲಾತಿ ಅಂಶಗಳ, ವ್ಯವಹಾರ ವಹಿವಾಟುಗಳ ಕುರಿತಾದ ವರ್ತಮಾನದ ಸಂಗತಿಗಳ ಕುರಿತು ಅವಲೋಕನ ಮಾಡುವ ಅವಶ್ಯಕತೆ ಇದೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಸಂಧ್ಯಾ ಆರ್. ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಪ್ರೊ.ಟಿ.ವಿ ಚೌಹಾಣ, ವಿವಿಧ ಕಾಲೇಜುಗಳ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.
ಅಕ್ಷರ ಪ್ರಾರ್ಥಿಸಿದರು. ಕಚೇರಿ ಅಧೀಕ್ಷಕ ಪಿ.ಜಿ ಅಂಗಡಿ ಪರಿಚಯಿಸಿದರು. ಕಚೇರಿ ಸಿಬ್ಬಂದಿ ಸವಿತಾ ಮೂಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾರದಾ ಮತ್ತು ರೇಣುಕಾ ನಿರೂಪಿಸಿದರು. ಪ್ರಕಾಶ ಚೌಗಲೆ ವಂದಿಸಿದರು.