ಹಾವೇರಿ: ವಿಶ್ವಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗುವ ಕ್ರೀಡಾಪಟುಗಳಿಗೆ ಪಕ್ಕದ ರಾಜ್ಯಗಳಲ್ಲಿ ನೀಡುತ್ತಿರುವಂತೆ ನಮ್ಮ ರಾಜ್ಯದಲ್ಲೂ ಸರ್ಕಾರಿ ಹುದ್ದೆ ಹಾಗೂ ಕನಿಷ್ಠ 50 ಲಕ್ಷ ರೂ. ಬಹುಮಾನ ನೀಡಬೇಕು ಎಂದು ರಾಜ್ಯ ಖೋ-ಖೋ ಸಂಸ್ಥೆಯ ಉಪಾಧ್ಯಕ್ಷ ಶಿವಯೋಗಿ ಎಲಿ ಒತ್ತಾಯಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕಳಪೆ ಕ್ರೀಡಾ ನೀತಿಯಿಂದ ವಿಶ್ವಮಟ್ಟದ ಕ್ರೀಡಾಪಟುಗಳನ್ನು ಸರಿಯಾಗಿ ಗೌರವಿಸದೇ ಅವಮಾನಿಸಲಾಗುತ್ತಿದೆ. ಇತ್ತಿಚೇಗೆ ನಡೆದ ವಿಶ್ವಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಭಾರತ ದೇಶದಿಂದ ಸ್ಪಧಿಸಿದ್ದ ಪುರುಷ ಹಾಗೂ ಮಹಿಳೆಯರ ತಂಡಗಳು ಗೆದ್ದು, ದೇಶದ ಕೀರ್ತಿ ಹೆಚ್ಚಿಸಿವೆ. ಈ ತಂಡಗಳಲ್ಲಿ ಕರ್ನಾಟಕದ ಚೈತ್ರಾ ಹಾಗೂ ಗೌತಮ್ ಎಂಬ ಕ್ರೀಡಾಪಟುಗಳು ಭಾಗವಹಿಸಿದ್ದು, ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ. ಆದರೆ ಸರ್ಕಾರ ಪ್ರತಿ ಕ್ರೀಡಾಪಟುಗಳಿಗೆ ಕೇವಲ ಐದು ಲಕ್ಷ ರೂ. ಬಹುಮಾನ ನೀಡಿ ಸುಮ್ಮನಾಗಿದೆ. ಹಾಗಾಗಿ ರಾಜ್ಯ ಖೋ ಖೋ ಸಂಸ್ಥೆಯ ಹಲವು ಬೇಡಿಕೆಗಳನ್ನು ಈಡೇರಿಸಲು ಫೆ.10ರಂದು ಜಿಲ್ಲಾಧಿಕಾರಿಯವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುತ್ತದೆ. ಫೆ.18ರಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ರಾಷ್ಟ್ರೀಯ ಒಲಂಪಿಕ್ ಸಂಸ್ಥೆಯಲ್ಲಿ ಯಾವುದಾದರೂ ಕಾನೂನು ಬದಲಾಗಿದ್ದರೆ, ಅದನ್ನು ಸರಿಪಡಿಸಬೇಕು. ಮುಂದೆ ಬದಲಾವಣೆ ಮಾಡದಂತೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ನೀಡಿರುವ ಅನುದಾನ ದುರ್ಬಳಕೆಯಾದ ಆರೋಪಗಳಿದ್ದು, ಅವುಗಳನ್ನು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಒಲಂಪಿಕ್ ಅಸೋಸಿಯೇಶನ್ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜು ರಾಜಕೀಯ ಪ್ರಭಾವವನ್ನು ಬೀರಿ ಕ್ರೀಡಾ ನೀತಿಯಲ್ಲಿ ಹಲವು ಬದಲಾವಣೆ ಮಾಡಿದ್ದಾರೆ. ತಮ್ಮ ಸಂಸ್ಥೆಯ ಮೂಲಕವೇ ಅನುದಾನ ಕೇಳಬೇಕೆಂದು ನಿಯಮ ಸೇರಿಸಿದ್ದಾರೆ. 24 ವರ್ಷಗಳಿಂದ ಅಧ್ಯಕ್ಷರಾಗಿದ್ದಾರೆ. ಇವರನ್ನು ಬೆಂಬಲಿಸಿದರೆ ಮಾತ್ರ ಅಧಿಕೃತ ಕ್ರೀಡಾ ಸಂಸ್ಥೆಗಳಿಗೆ ಅನುದಾನ ಕೊಡಿಸುತ್ತಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮುಖಂಡ ಹನುಮಂತಪ್ಪ ಕಬ್ಬಾರ, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಸುಭಾಷ ಬೆಂಗಳೂರ, ಅರುಣ ಕಾಳಪ್ಪನವರ, ಆನಂದ ನಾಲವಾಡ, ಶಂಕರ ದಡ್ಡಿ, ದಿಲೀಪಕುಮಾರ, ಬಸವರಾಜ ಹಾಲಪ್ಪನವರ ಇದ್ದರು.