ಹಾವೇರಿ: ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣ ಮಾಡಿದ ಧೀಮಂತ ಹಾಗೂ ಅಪ್ರತಿಮ ನಾಯಕರು. ನೂರಾರು ಕೆರೆಗಳನ್ನು ಹಾಗೂ ಹಲವಾರು ದೇವಸ್ಥಾನಗಳನ್ನು ಕಟ್ಟಿಸುವ ಮೂಲಕ ಅಂದಿನ ಕಾಲದಲ್ಲೇ ಉತ್ತಮ ಆಡಳಿತಗಾರ ಎನಿಸಿಕೊಂಡಿದ್ದರು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ ಹೇಳಿದರು.
ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಇಂತಹ ಮಹಾನ್ ನಾಯಕರ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ರಾಣೇಬೆನ್ನೂರ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಕಾಂತೇಶರೆಡ್ಡಿ ಗೋಡಿಹಾಳ ಮಾತನಾಡಿ, ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯುಳ್ಳವರಾಗಿದ್ದು, ಬೆಂಗಳೂರನ್ನು ನಾಲ್ಕು ದಿಕ್ಕುಗಳಲ್ಲಿ ವಿಸ್ತಾರವಾಗಿ ನಿರ್ಮಿಸಿದ್ದಾರೆ. 64 ಪೇಟೆಗಳನ್ನು ನಿರ್ಮಿಸಿದ್ದಾರೆ. ಸರಣಿ ಕೆರೆಗಳನ್ನು ನಿರ್ಮಾಣ ಮಾಡುವ ಮೂಲಕ ಸಾವಿರ ಕೆರೆಗಳ ಸರದಾರ ಎಂಬ ಬಿರುದು ಪಡೆದಿದ್ದಾರೆ ಎಂದರು.
ಎಂ.ಎಸ್.ಕೋರಿಶೆಟ್ಟರ ಮಾತನಾಡಿ, ಕೆಂಪೇಗೌಡರು ಇಡಿ ಜಗತ್ತೇ ನೋಡುವ ರೀತಿಯಲ್ಲಿ ಬೆಂಗಳೂರು ನಗರ ನಿರ್ಮಾಣ ಮಾಡಿದ್ದಾರೆ. ಅದೇ ರೀತಿ ಹಾವೇರಿ ನಗರ ಅಭಿವೃದ್ಧಿಯಾಗಬೇಕು ಎಂದು ಹೇಳಿದರು.
ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ವಿವಿಧ ಶಾಲಾ-ಕಾಲೇಜುಗಳಲ್ಲಿ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಆಕರ್ಷಕ ಮೆರವಣಿಗೆ:
ಕಾರ್ಯಕ್ರಮಕ್ಕೂ ಮೊದಲು ನಗರದ ತಾಲೂಕು ಪಂಚಾಯಿತಿ ಆವರಣದಿಂದ ನಾಡಪ್ರಭು ಕೆಂಪೇಗೌಡರ ಭಾವಚಿತ್ರದ ಮೆರವಣಿಗೆ ಜರುಗಿತು. ಕೆಂಪೇಗೌಡರ ಛದ್ಮವೇಷಧಾರಿ ಸುಗಂಧಿ, ಮಹಿಳಾ ಡೊಳ್ಳು ತಂಡ ನೋಡುಗರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ, ಡಿಡಿಪಿಯಿ ಡಾ.ಎಚ್.ಉಮೇಶಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಮೃತಗೌಡ ಪಾಟೀಲ, ತಹಸೀಲ್ದಾರ ಶಂಕರ ಜಿ.ಎಸ್, ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ನಿರಂಜನಮೂರ್ತಿ, ಆರ್.ಎಚ್.ದೊಡ್ಡಮನಿ, ಕೆ.ಎಚ್.ಸಿದ್ದಣ್ಣನವರ, ಇತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು.
ಅವರಂತೆ ನಮ್ಮ ಊರು ಕಟ್ಟಬೇಕು
ವಿಶ್ವದಲ್ಲೇ ಎಲ್ಲರನ್ನೂ ಕೈಬಿಸಿ ಕರೆಯುವ ಸುಂದರ ಬೆಂಗಳೂರ ನಗರವನ್ನು ಕೆಂಪೇಗೌಡರು ನಿರ್ಮಾಣ ಮಾಡಿದ್ದಾರೆ. ಅವರ ದೂರದೃಷ್ಟಿಯಂತೆ ನಾವು ನಮ್ಮ ಊರು ಹಾಗೂ ನಗರ ಕಟ್ಟಬೇಕು ಎಂದು ಎಡಿಸಿ ಪೂಜಾರ ವೀರಮಲ್ಲಪ್ಪ ಹೇಳಿದರು.