ಹಾವೇರಿ: ಕಾಯಕ ಶರಣರ ವಿಚಾರಗಳನ್ನು ಅಳವಡಿಸಿಕೊಂಡಾಗ ಮಾತ್ರ ಶರಣರ ಜಯಂತಿ ಆಚರಣೆಗೆ ಬೆಲೆ ಬರುತ್ತದೆ. ಆದ್ದರಿಂದ ಇಂದಿನ ಯುವಪೀಳಿಗೆ ಕಾಯಕ ನಿರತರಾಗಬೇಕು ಎಂದು ಹೊಸಮಠದ ಶ್ರೀ ಬಸವಶಾಂತ ಸ್ವಾಮೀಜಿ ಹೇಳಿದರು.
ನಗರದ ಹೊಸಮಠದ ಸಭಾಭವನದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಕಾಯಕ ಶರಣರ ಜಯಂತ್ಯುತ್ಸವದಲ್ಲಿ ಅವರು ಸಾನ್ನಿಧ್ಯ ವಹಿಸಿಕೊಂಡು ಮಾತನಾಡಿದರು.
ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, 12ನೇ ಶತಮಾನದಲ್ಲಿ ತಳ ಸಮುದಾಯದ ಜನರನ್ನು ಮೇಲಕ್ಕೆ ಎತ್ತಲು ಬಸವಣ್ಣನವರು ಬಹಳಷ್ಟು ಶ್ರಮಿಸಿದರು. ಈ ಐವರು ಕಾಯಕ ಶರಣರು ಬಸವಣ್ಣನವರ ಅನುಯಾಯಿಗಳಾಗಿ ಸಮಾಜ ಸುಧಾರಣೆಯನ್ನು ಕಾಯಕದ ಮೂಲಕ ಪ್ರತಿಪಾದಿಸಿದರು ಎಂದು ಹೇಳಿದರು.
ಚರ್ಮ ಅಭಿವೃದ್ಧಿ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್.ಮಾಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲ ಕರ್ನಾಟಕ ವೀರಶೈವ ಮಹಾಸಭಾ ಅಧ್ಯಕ್ಷ ಶಿವಬಸಪ್ಪ ಮುದ್ದಿ ಉಪನ್ಯಾಸ ನೀಡಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಕೊರಿಶೆಟ್ಟರ್, ಜಿಪಂ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ಉಡಚಪ್ಪ ಮಾಳಗಿ, ಪೃಥ್ವಿ ಬೆಟಗೇರಿ, ಸಂಜೀವಕುಮಾರ ನೀರಲಗಿ, ಹೊನ್ನಪ್ಪ ತಗಡಿನಮನಿ, ಅಶೋಕ ಮರೆಮ್ಮನವರ, ಶಂಭು ಕಳಸದ, ಶೆಟ್ಟಿ ವಿಭೂತಿ, ಮಹಾಂತೇಶ ಯಲ್ಲಾಪುರ, ಚಂದ್ರಪ್ಪ ಸನದಿ, ಇತರರಿದ್ದರು.