ಜಿಲ್ಲೆ

ಮಳೆಗಾಗಿ ಗ್ರಾಮಸ್ಥರಿಂದ ಕತ್ತೆ ಮೆರವಣಿಗೆ

ರಾಣೆಬೆನ್ನೂರ: ಮಳೆ ಬಾರದ ಹಿನ್ನೆಲೆಯಲ್ಲಿ ವರುಣನ ಕೃಪೆಗಾಗಿ ಪ್ರಾರ್ಥಿಸಿ ರಾಣೆಬೆನ್ನೂರ ತಾಲೂಕಿನ ಮೆಣಸಿನಹಾಳ ಗ್ರಾಮಸ್ಥರು ಶುಕ್ರವಾರ ರಾತ್ರಿ ಕತ್ತೆಗೆ ಬೇವಿನ ತಪ್ಪಲಿನ ಮಾಲೆ ಹಾಕಿ ಮೆರವಣಿಗೆ ನಡೆಸಿದ್ದಾರೆ.
ಕತ್ತೆಗೆ ಕುಂಕುಮ, ಹರಿಶಿಣ ಹಚ್ಚಿ, ಬೇವು, ಹೂವಿನ ಮಾಲೆ ಹಾಕಿ, ಗಂಧದ ಕಡ್ಡಿ ಬೆಳಗಿ ಗ್ರಾಮದ ತುಂಬ ಮೆರವಣಿಗೆ ಮಾಡಿದರು. ಮನೆ ಮುಂದೆ ಬಂದ ಕತ್ತೆಗೆ ಜನರು ಪೂಜೆಗೈದು ದವಸ, ಧಾನ್ಯಗಳನ್ನು ನೀಡಿದ್ದಾರೆ. ಈ ಧಾನ್ಯಗಳನ್ನು ಹೊಲಕ್ಕೆ ಕೊಂಡೊಯ್ದ ಯುವಕರ ತಂಡ ಹೊಲದಲ್ಲೇ ಅಡುಗೆ ಮಾಡಿ ಜನರಿಗೆ ಊಟ ಬಡಿಸಿ ಮಳೆಗಾಗಿ ಪ್ರಾರ್ಥಿಸಿದೆ.
ಈ ಹಿಂದೆ ತಮ್ಮ ಪೂರ್ವಜರು ಮಳೆ ಬಾರದಿದ್ದಾಗ ಮಾಡುತ್ತಿದ್ದ ಸಂಪ್ರದಾಯವನ್ನೇ ಗ್ರಾಮಸ್ಥರು ಮುಂದುವರಿಸಿದ್ದಾರೆ. ಈ ಮೂಲಕ ವರುಣನ ಕೃಪೆಗಾಗಿ ಕಾದು ಕುಳಿತಿದ್ದಾರೆ.