ಜಿಲ್ಲೆ

ಮಕ್ಕಳಿಗೆ ವಿವೇಕ ಬಿತ್ತುವ ಕೆಲಸ ಆಗಬೇಕು; ಡಯಟ್ ಸಾಹಿತ್ಯ ಪಂಚಮಿ ಸಮಾರಂಭದಲ್ಲಿ ಜಾನಪದ ತಜ್ಞ ಶಂಭು ಬಳಿಗಾರ ಸಲಹೆ

ಹಾವೇರಿ: ಕಾಲೇಜು, ಪದವಿ, ಸ್ನಾತಕೋತ್ತರ, ಪಿಎಚ್‌ಡಿ, ಮತ್ತಿತರ ಪದವಿ ವೃತ್ತಿಗೆ ಅರ್ಹತೆ ಮಾತ್ರ. ಎಷ್ಟೇ ಜ್ಞಾನ, ಬುದ್ದಿವಂತಿಕೆ ಇದ್ದರೇನು ಫಲ. ಇರುವ ಜ್ಞಾನವನ್ನು ಮಕ್ಕಳಿಗೆ ಅರಿಯುವಂತೆ ಪಾಠ ಮಾಡದಿದ್ದರೆ ಫಲವಿಲ್ಲ. ಮಕ್ಕಳಿಗೆ ಅರ್ಥವಾಗುವಂತೆ ಸರಳವಾಗಿ ವಿವೇಕವನ್ನು ಬಿತ್ತುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಜಾನಪದ ತಜ್ಞ ಶಂಭು ಬಳಿಗಾರ ಸಲಹೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ವತಿಯಿಂದ ಕರ್ಜಗಿ ರಸ್ತೆಯ ಡಯಟ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಸಾಹಿತ್ಯ ಪಂಚಮಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಪಾಠ ಕಲಿಸುವ ಸಲುವಾಗಿಯೇ ಸಂಬಳ ಕೊಡುತ್ತಾರೆ. ಅರ್ಧ ಡ್ಯೂಟಿ ಶಾಲೆಯಲ್ಲಿದ್ದರೆ ಅರ್ಧ ಡ್ಯೂಟಿ ಮನೆಯಲ್ಲಿ ಇರಬೇಕು. ನಾಳೆಯ ಪಾಠವನ್ನು ಇಂದು ಸರಿಯಾಗಿ ತಯಾರಿ ಮಾಡಿಕೊಂಡಿರಬೇಕು. ಈಗಿನ ಸೌಲಭ್ಯಗಳು ನಮ್ಮ ಕಾಲದಲ್ಲಿ ಇರಲಿಲ್ಲ. ನಿಮ್ಮಷ್ಟು ಸಂಬಳ ಇರಲಿಲ್ಲ. ಆದರೂ ಕೆಲವರು ಸರಿಯಾಗಿ ಪಾಠ ಮಾಡುವುದಿಲ್ಲ. ತಮ್ಮ ಕೆಲಸಕ್ಕೆ ಅನ್ಯಾಯ ಮಾಡುತ್ತಾರೆ. ವೃತ್ತಿಯನ್ನು ಗೌರವಿಸಿ. ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು ಎಂದರು.
ಮಕ್ಕಳು ಸಂಸ್ಕೃತಿಯ ರೂಪದಲ್ಲಿ ನಮ್ಮೆದುರು ಇರುತ್ತಾರೆ. ಅವರಿಗೆ ನಾವು ಸಂಸ್ಕಾರ ಕೊಡಬೇಕಿದೆ. ಕಬ್ಬಿನಿಂದ ಬೆಲ್ಲ ತೆಗೆಯುವುದು ಸಂಸ್ಕೃತಿ. ಹೆಂಡ ತೆಗೆಯುವುದು ವಿಕೃತಿ. ಸಂಸ್ಕಾರ ಸೌಂದರ್ಯದ ಫಲ. ವಿಕೃತಿಯಿಂದ ದೂರ ಇರುವಂತೆ ನಾವು ನೋಡಿಕೊಳ್ಳಬೇಕು. ತಿದ್ದಿ ತೀಡಬೇಕು. ಸರಿ, ತಪ್ಪು ಮನನ ಮಾಡಬೇಕು ಎಂದರು.
ಕಲಾವಿದನಿಗೆ ಸೌಂದರ್ಯ ಪ್ರಜ್ಞೆ ಇರಬೇಕು. ಶಿಕ್ಷಕನಿಗೆ ಸಮಯ ಪ್ರಜ್ಞೆ ಇರಬೇಕು. ಕಾವ್ಯದಿಂದ ಹಣ, ಸಂತೋಷ ಎಲ್ಲ ಸಿಗುತ್ತದೆ. ಸಾಹಿತ್ಯ ರಚಿಸುವಾಗ ಸಭ್ಯತೆ ಎಲ್ಲೆಯ ಮೀರಬಾರದು. ಶೃಂಗಾರದಲ್ಲೂ ಅಶ್ಲೀಲತೆ ಕಾಣದಂತೆ ಸಾಹಿತ್ಯ ರಚಿಸಬೇಕು. ಶಿಕ್ಷಕ ವೃತ್ತಿಯ ಜತೆಗೆ ಸಾಹಿತ್ಯದಲ್ಲೂ ಅಭಿರುಚಿ ಹೊಂದಿರುವ ಶಿಕ್ಷಕರು ಇತರರಿಗೆ ಮಾದರಿ ಎಂದು ಶ್ಲಾಘಿಸಿದರು.
ಡಯಟ್ ಉಪನಿರ್ದೇಶಕ ಗಿರೀಶ ಪದಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡದ ವಿದ್ಯಾವರ್ದಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸಾಹಿತಿ ಶ್ರೀನಿವಾಸ ವಾಡಪ್ಪಿ ಮಾತನಾಡಿದರು. ಶಿಕ್ಷಕ ನರಸಿಂಹ ಕೋಮಾರ ವಚನ ಗೀತೆ ಗಾಯನ ನಡೆಸಿಕೊಟ್ಟರು.
ಡಿವೈಪಿಸಿ ಲತಾಮಣಿ ಟಿ.ಎಂ., ಆರ್.ವಿ.ಚಿನ್ನಿಕಟ್ಟಿ, ಜಿಲ್ಲೆಯ ಶಿಕ್ಷಕ ಸಾಹಿತಿಗಳು, ಯುವ ಬರಹಗಾರರು, ಮಕ್ಕಳ ಸಾಹಿತ್ಯ, ನಾಟಕ, ಜನಪದ ಸಾಹಿತ್ಯ ರಚನಾಕಾರರು ಪಾಲ್ಗೊಂಡಿದ್ದರು.
ಓದಿನಿಂದ ಜ್ಞಾನ ವೃದ್ದಿ
ಹೊನ್ನಾವರದ ಹಿರಿಯ ಸಾಹಿತಿ ಶ್ರೀಪಾದ ಶೆಟ್ಟಿ ಮಾತನಾಡಿ, ಎಲ್ಲರೂ ಮೊದಲು ಓದಲು ಶುರುಮಾಡಿ. ಉತ್ತಮ ಜ್ಞಾನ ತುಂಬಿರುವ ಸಾಹಿತ್ಯ ಓದಿ. ಸಾಹಿತ್ಯ ಜ್ಞಾನ ಹಂಚುವ ದೀವಿಗೆಯಂತೆ. ಇದು ನಿಮ್ಮನ್ನು ಬಹು ಎತ್ತರಕ್ಕೆ ಕೊಂಡೊಯ್ಯುತ್ತದೆ. ಮಕ್ಕಳನ್ನು ಮಾತನಾಡಿಸಿ. ಅವರ ಮನದಾಳ ಅರಿತು ಅವರ ಜೀವನ ಜ್ಯೋತಿ ಬೆಳಗಿಸಿ ಎಂದು ಕಿವಿಮಾತು ಹೇಳಿದರು.