ಹಾವೇರಿ: ಕನ್ನಡ ನಾಮಫಲಕ ಅಳವಡಿಕೆಗಾಗಿ ಹೋರಾಟ ಮಾಡುತ್ತಿದ್ದ ಕನ್ನಡ ಪರ ಹೋರಾಟಗಾರ ಟಿ.ಎ.ನಾರಾಯಣಗೌಡರನ್ನು ಬಂಧಿಸಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಕಾರ್ಯಕರ್ತರು ನಗರದ ತಹಶೀಲ್ದಾರ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ಮಾಡಿದರು. ಅಪರ ತಹಶೀಲ್ದಾರ್ ಅಮೃತಗೌಡ ಪಾಟೀಲರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಂಗಡಿ ಹಾಗೂ ವ್ಯಾಪಾರ ಉದ್ದಿಮೆಯ ಮಹಲು, ಕಾರ್ಖಾನೆಗಳು ಸೇರಿದಂತೆ ಎಲ್ಲೆಡೆ ನಾಮಫಲಕಗಳು ಶೇ.60ರಷ್ಟು ಕನ್ನಡವನ್ನು ಹೊಂದಿರಬೇಕು ಎಂದು ಆದೇಶಿಸಿದೆ. ಈ ಆದೇಶವನ್ನು ಹಲವರು ಪಾಲಿಸದೇ ದರ್ಪ ತೋರುತ್ತಿದ್ದಾರೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸುವಾಗ ಪೊಲೀಸರು ಹೋರಾಟವನ್ನು ಹತ್ತಿಕ್ಕಲು ಹೋರಾಟಗಾರರನ್ನು ಬಂಧಿಸಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು.
ಈ ಕೂಡಲೇ ಟಿ.ಎ.ನಾರಾಯಣಗೌಡ ಸೇರಿ ಇತರ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು. ಅವರ ಮೇಲೆ ದಾಖಲಿಸಿರುವ ಮೊಕದ್ದಮೆ ಹಿಂಪಡೆಯಬೇಕು. ಇಲ್ಲವಾದರೆ ಹೋರಾಟ ರಾಜ್ಯವ್ಯಾಪಿ ಹರಡಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ, ಜಿಲ್ಲಾ ಉಪಾಧ್ಯಕ್ಷ ಇಸೂಫ್ ಸೈಕಲಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಮರಾಠೆ, ಜಿಲ್ಲಾ ಪ್ರಧಾನ ಸಂಚಾಲಕ ದ್ಯಾಮಣ್ಣ ಮಲ್ಲಾಡದ, ಜಿಲ್ಲಾ ಸಂಘಟನಾ ಸಂಚಾಲಕ ಮಾಲತೇಶ ಜಿ.ಕೆ., ತಿಪ್ಪೇಶ ನಡುವಿನಕೇರಿ, ಪ್ರಕಾಶ ಪರಪ್ಪಗೌಡ್ರ, ಕುಮಾರ ಸುಳ್ಳುನವರ, ಬಸವಣ್ಣಯ್ಯ ಹಳ್ಳಿಕೊಪ್ಪದಮಠ, ಪ್ರಕಾಶ ಡೊಂಬರ, ಶಂಕರ ಬಡಿಗೇರ, ರಾಮಚಂದ್ರಪ್ಪ ಹಿಂಡಸಗಟ್ಟಿ, ಫಕ್ಕೀರಯ್ಯ ವಸ್ತ್ರಮಠ, ಖಲಂದರ ಯಲದಹಳ್ಳಿ, ಶೇಖಪ್ಪ ದೀಪಾವಳಿ, ಚಂದ್ರಪ್ಪ ತಿಪ್ಪಕ್ಕನವರ, ರಮೇಶ ನಡುವಿನಕೇರಿ, ರೇವಣಸಿದ್ದಯ್ಯ ಹಿರೇಮಠ, ಕೃಷ್ಣಾ ಬಡಿಗೇರ, ಬಸವರಾಜ ಹಿಂಡಿ, ಮತ್ತಿತರರು ಪಾಲ್ಗೊಂಡಿದ್ದರು.