ಹಾವೇರಿ: ನೊಂದ ಮಹಿಳೆಗೆ ಶೀಘ್ರವಾಗಿ ನ್ಯಾಯ ಒದಗಿಸುವುದು ಕಾನೂನಿನ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಗಮನಹರಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ‘ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಹಾಗೂ ನಿಯಮಗಳ ಅನುಷ್ಠಾನದಲ್ಲಿ ಭಾಗಿದಾರ ಇಲಾಖೆಗಳ ಪಾತ್ರ’ ಕುರಿತು ಎರಡು ದಿನಗಳ ಓರಿಯಂಟೇಶನ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಪ್ರತಿ ಕಾನೂನು ಜಾರಿಗೆ ಮಾಡಿದಾಗಲೂ ಆ ಕಾನೂನಿನ ಅರಿವು ಮೂಡಿಸುವ ಉದ್ದೇಶ ಹೊಂದಿದೆ. ದೌರ್ಜನ್ಯಕ್ಕೊಳಗಾದ ಮಹಿಳೆಗೆ ವಸತಿ, ಜೀವನಾಂಶ ಸೇರಿದಂತೆ ಅಗತ್ಯ ನೆರವು ಒದಗಿಸುವುದು ಅಗತ್ಯವಾಗಿದೆ. ದೌರ್ಜನ್ಯ ಪ್ರಕರಣಗಳಲ್ಲಿ ಕೂಡಲೇ ಎಫ್‌ಐಆರ್ ದಾಖಲಿಸಬಾರದು. ಪ್ರಕರಣಗಳ ಮಾಹಿತಿ ಕಲೆಹಾಕಬೇಕು. ಸಣ್ಣ-ಪುಟ್ಟ ಕಾರಣಗಳಿದ್ದರೆ ಕೌನ್ಸಲಿಂಗ್ ಮೂಲಕ ಮನವೋಲಿಸಿ ರಾಜಿ ಸಂಧಾನ ಮಾಡಿಸುವ ಮೂಲಕ ಜೀವನ ನಡೆಸಲು ಸಲಹೆ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ ಮಾತನಾಡಿ, ಭ್ರೂಣ ಲಿಂಗಪತ್ತೆ ಹಾಗೂ ಭ್ರೂಣಹತ್ಯೆ ನಿಷೇಧಿಸಲಾಗಿದೆ. ಮಕ್ಕಳ ಆರೋಗ್ಯದ ಹಿತದೃಷ್ಟಿ ಮಾತ್ರ ಸ್ಕ್ಯಾನಿಂಗ್ ಮಾಡಿಸಬೇಕು. ಜಿಲ್ಲೆಯಲ್ಲಿ 71 ಸ್ಕ್ಯಾನ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಭ್ರೂಣಲಿಂಗಪತ್ತೆ ಪ್ರಕರಣಗಳು ಕಂಡುಬಂದಿಲ್ಲ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ ಮಾತನಾಡಿ, ಅಪ್ರಾಪ್ತರನ್ನು ಪೊಲೀಸ್ ಠಾಣೆಗೆ ಕರೆತರುವಂತಿಲ್ಲ ಹಾಗೂ ಯುನಿಫಾರ್ಮನಲ್ಲಿ ವಿಚಾರಣೆ ನಡೆಸುವಂತಿಲ್ಲ. ದೌರ್ಜನ್ಯಕ್ಕೊಳದ ಮಕ್ಕಳ ಹಾಗೂ ಮಹಿಳೆಯರಿಗೆ ಮುಕ್ತ ವಾತಾವರಣ ಒದಗಿಸಿಕೊಡಬೇಕು ಹಾಗೂ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದಾರ್ತಿ, ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಎಸ್.ಮಜೀದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಣ್ಣಪ್ಪ ಹೆಗಡೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ಯಾನಲ್ ವಕೀಲೆ ರೇಹನಾ ಚನ್ನಪ್ಪಟ್ಟಣ ಹಾಗೂ ಇಡಾರಿ ಸಂಸ್ಥೆ ಅಧ್ಯಕ್ಷೆ ಪರಿಮಳಾ ಜೈನ್, ಸೋಮನಗೌಡ್ರ ಗಾಳಿಗೌಡ್ರ ಉಪಸ್ಥಿತರಿದ್ದರು.
ಸಾಧಕಿಯರಿಗೆ ಸನ್ಮಾನ:
ಮಗಳನ್ನು ಉಳಿಸಿ, ಮಗಳನ್ನು ಓದಿಸಿ ಕಾರ್ಯಕ್ರಮದ ಅಂಗವಾಗಿ ಕಬ್ಬಡಿ ಕ್ರೀಡೆಯಲ್ಲಿ ಸಾಧನೆ ಮಾಡಿದ ಜಿಲ್ಲೆಯ ಅಫ್ರಿದಾಬಾನು, ರೇಣುಕಾ ಬುಶೆಟ್ಟಿ, ಇಂಟರ್ ನ್ಯಾಷನಲ್ ಕ್ರಿಕೆಟ್‌ನಲ್ಲಿ ಭಾಗವಹಿಸಿದ ಗಂಗಮ್ಮ ಹರಿಜನ ಅವರನ್ನು ಸನ್ಮಾನಿಸಲಾಯಿತು.
ಭ್ರೂಣಹತ್ಯೆ ತಡೆದ ಪರಿಮಳಾ ಜೈನ್, ಬಾಲ್ಯ ವಿವಾಹ ತಡೆಯುವಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಇಲಾಖೆಯ ರೇಣುಕಾ, ಗಿರಿಜಾ ಹಾಗೂ ಶಾಂತಮ್ಮ, ಆಶಾ ಕಾರ್ಯಕರ್ತೆಯರಾದ ಶಿಲ್ಪಾ ಮುದಿಗೌಡ್ರ, ರತ್ನಾ ಮಾಳಗಿ, ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ರೇಖಾ ನಾಯಕ, ಸ್ಕ್ಯಾನ್ ಸೆಂಟರ್ ಸಹಾಯಕಿ ರತ್ನಾ, ಅರ್ಪಿತಾ ಉಪ್ಪಾರ ಹಾಗೂ ಸ್ಪಂದನಾ ದತ್ತು ಕೇಂದ್ರದಿಂದ ಹೆಣ್ಣು ಮಗುವನ್ನು ದತ್ತುಪಡೆದ ಮಂಜುನಾಥ ದಂಪತಿ ಹಾಗೂ ದೇವರಾಜ ತಿಪ್ಪಣ್ಣವರ ದಂತಿಯನ್ನು ಸನ್ಮಾನಿಸಲಾಯಿತು.